ಸಫಾಯಿ ಕರ್ಮಚಾರಿಗಳಿಗೆ ಕಾನೂನಾತ್ಮಕವಾಗಿ ಎಲ್ಲ ಸೌಲಭ್ಯಗಳು ಸಿಗಬೇಕು
ಧಾರವಾಡ,ಜೂ14: ಸಫಾಯಿ ಕರ್ಮಚಾರಿಗಳಾಗಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ರಾಷ್ಟ್ರೀಯ ಮತ್ತು ರಾಜ್ಯ ಸರಕಾರಗಳಿಂದ ಕಾನೂನಾತ್ಮಕವಾಗಿ ಸೀಗಬೇಕಾದ ಎಲ್ಲ ಸೌಕರ್ಯ, ಸೌಲಭ್ಯಗಳನ್ನು ಪೂರೈಸುವುದು ಆಯಾ ಸ್ಥಳೀಯ ಸಂಸ್ಥೆ, ಇಲಾಖೆಗಳ ಮುಖ್ಯಸ್ಥರ ಕರ್ತವ್ಯವಾಗಿದೆ. ಪೌರಕಾರ್ಮಿಕರಿಗೆ ಸೀಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಅನಗತ್ಯ ವಿಳಂಬ ಅಥವಾ ಅವುಗಳನ್ನು ತೀರಸ್ಕರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡುವದಾಗಿ ರಾಷ್ಟ್ರೀಯ ಸಫಾಯಿ ಕಾರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಫಾಯಿ ಕರ್ಮಚಾರಿಗಳ ಸೌಲಭ್ಯ ಮತ್ತು ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳಲ್ಲಿ, ಸರಕಾರದ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿಪಡಿಸಬೇಕು. ಅವರಿಗೆ ಉತ್ತಮ ಉಪಹಾರ, ಊಟ ನೀಡಬೇಕು. ಪುರುಷ ಮತ್ತು ಮಹಿಳಾ ಪೌರ ಕಾರ್ಮಿಕರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿ ಕಲ್ಪಿಸಬೇಕು. ಸಂರಕ್ಷಣ ಕವಚ, ಸಮವಸ್ತ್ರ, ಗಮ್‍ಬೂಟ್ ವಿತರಿಸಬೇಕು. ಪ್ರತಿ ಸಫಾಯಿ ಕರ್ಮಚಾರಿಗೆ ನ್ಯಾಯಯುತವಾಗಿ ಸೀಗಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.
ಸಫಾಯಿ ಕರ್ಮಚಾರಿಗಳಿಂದ ಸಮಸ್ಯೆ, ದೂರುಗಳನ್ನು ಖುದ್ದು ಆಲಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಅವರು ಉತ್ತರ ಪಡೆದರು. ಕಲಘಟಗಿ, ಅಳ್ನಾವರ ಪಟ್ಟಣ ಪಂಚಾಯಿತಿಗಳಲ್ಲಿ ಪೌರ ಕಾರ್ಮಿಕರಿಗೆ ನಿಯಮಿತವಾಗಿ ಮಾಸಿಕ ವೇತನ ಆಗುತ್ತಿಲ್ಲ ಎಂಬುದನ್ನು ತಿಳಿದು, ಅಲ್ಲಿನ ಮುಖ್ಯಾಧಿಕಾರಿಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ವೇತನ ಪಾವತಿಸುವಂತೆ ಅಧ್ಯಕ್ಷರು ನಿರ್ದೇಶನ ನೀಡಿದರು.
ಪೌರ ಕಾರ್ಮಿಕರಿಂದ, ಪೌರ ಕಾರ್ಮಿಕ ಸಂಘಟನೆಗಳಿಂದ ಸಮಸ್ಯೆಗಳನ್ನು ಆಲಿಸಿದ ಆಯೋಗದ ಅಧ್ಯಕ್ಷರು, ಮುಂದಿನ ಆರು ತಿಂಗಳಲ್ಲಿ ಪರಿಹರಿಸಿ, ವರದಿ ನೀಡಬೇಕು. ಸಫಾಯಿ ಕರ್ಮಚಾರಿಗಳಿಗೆ ತೊಂದರೆ, ಕಿರುಕುಳ ಆದರೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಮಾಹಿತಿ ನೀಡಬೇಕು ಮತ್ತು ಆಯೋಗಕ್ಕೆ ದೂರು ಸಲ್ಲಿಸಲು ಬಯಸಿದಲ್ಲಿ ದೂರವಾಣಿ ಸಂಖ್ಯೆ : 01124648924 ಗೆ ಕರೆ ಮಾಡಿ ತಿಳಿಸಬಹುದು ಅಥವಾ ಎನ್‍ಸಿಎಸ್‍ಕೆ (ಓಅSಏ) ವೆಬ್‍ಸೈಟ್ ಮೂಲಕ ತಮ್ಮ ದೂರು ದಾಖಲಿಸಬಹುದು. ಸೂಕ್ತ ತನಿಖೆ ನಡೆಸಿ ಪರಿಹರಿಸಲಾಗುವುದು ಮತ್ತು ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.