ಕಿಡ್ನಿ ಕಸಿಯು ಮೂತ್ರಪಿಂಡ ವೈಫಲ್ಯ ರೋಗಿಗಳಿಗೆ ವರದಾನ: ಡಾ. ಬಿ.ಎಸ್. ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.14:ಕಿಡ್ನಿ ಕಸಿಯು ಮೂತ್ರಪಿಂಡದ ವೈಫಲ್ಯ ರೋಗಿಗಳಿಗೆ ವರದಾನವಾಗಿದೆ ಎಂದು ಡಾ. ಬಿ.ಎಸ್. ಪಾಟೀಲ ಹೇಳಿದರು.
ನಗರದ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಕಿಡ್ನಿ ಕಸಿಯ ಮಹತ್ವದ ಕುರಿತು ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನಾತ್ಮಕ ಹಾಗೂ ಸಮಾಜಮುಖಿ ಕಾರ್ಯಕ್ರಮ ಹಾಕಿಕೊಳ್ಳುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಅಷ್ಟೇಯಲ್ಲ ಸಂಸ್ಥೆಗೂ ಒಳ್ಳೆಯ ಹೆಸರು ಬರುತ್ತದೆ. ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.
ಮೂತ್ರಪಿಂಡ ವೈಫಲ್ಯ ಬೇಗ ಪತ್ತೆಹಚ್ಚಲು ಸಮಾಜದಲ್ಲಿ ಶಿಬಿರಗಳನ್ನು ಏರ್ಪಡಿಸುವ ಮುಖಾಂತರ ರಕ್ತದೊತ್ತಡ, ಮಧುಮೇಹ ಪರೀಕ್ಷೆ, ರಕ್ತದ ಕ್ರಿಯಾಟಿನೈನ್ ಪರೀಕ್ಷೆ ಮಾಡಿಕೊಳ್ಳುವುದರಿಂದ ಮತ್ತು ವರ್ಷಕ್ಕೊಮ್ಮೆಯಾದರೂ ಈ ತರಹದ ಪರೀಕ್ಷೆಗೆ ಒಳಪಡಬೇಕು. ಇದರಿಂದ ಮೂತ್ರಪಿಂಡ ವೈಫಲ್ಯಗಳನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ಸಹಾಯವಾಗುತ್ತದೆ.
ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಯುರೋಲಜಿ ವಿಭಾಗದ ಪುರುಷ ಹಾಗೂ ಮಹಿಳೆಯ ವಾರ್ಡ್‍ಗಳನ್ನು ಪ್ರತ್ಯೇಕವಾಗಿ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಮೆಹಬೂಬ್ ಕಲಬುರ್ಗಿ ಮಾತನಾಡಿ, ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಹಾಗೂ ಪರಿಣಿತ ವೈದ್ಯ ಇರುವದರಿಂದ ಹೆಚ್ಚಿನ ರೋಗಿಗಳನ್ನು ನಮ್ಮಲ್ಲಿಯೇ ಪರೀಕ್ಷೆ ಮಾಡುವುದರಿಂದ ಬೇರೆ ರಾಜ್ಯದ ಕಡೆಗೆ ಹೋಗುವಂತಿಲ್ಲ. ಆದ್ದರಿಂದ ಪರಿಣಿತ ವೈದ್ಯರ ವಿಭಾಗಗಳನ್ನು ಅಂದರೆ ಕಾರ್ಡಿಯೋಲಜಿ, ನೂರಾಲಜಿ, ಕ್ಯಾನ್ಸರ್ ವಿಭಾಗಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆಯಲಾಗುವುದು ಎಂದು ತಿಳಿಸಿದರು.
ಅಲಮೀನ್ ಆಸ್ಪತ್ರೆಯ ಅಧ್ಯಕ್ಷ ಡಾ. ಜಿಲಾನಿ ಅವಟಿ ಅವರು ಮಾತನಾಡಿ, ಯಾವುದೇ ಕಾರ್ಯ ಮಾಡಬೇಕೆಂದರೆ ಸ್ವ ಪ್ರಯತ್ನ ಶೌರ್ಯತನ, ಆತ್ಮವಿಶ್ವಾಸಗಳಿದ್ದರೆ ಉಳಿದ ಸಹಾಯಗಳು ತಾನಾಗಿಯೇ ಒದಗಿ ಬರುತ್ತವೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಿಡ್ನಿ ಮಹತ್ವ ಹಾಗೂ ಜನರಲ್ಲಿ ಇರುವ ಮೂಢನಂಬಿಕೆಗಳನ್ನು, ತಪ್ಪು ತಿಳುವಳಿಕೆ ಕುರಿತಾಗಿ ಕಾಲೇಜಿನ ಮಣಿಪಾಲಿನ ನುರಿತ ವೈದ್ಯರಾದ ಹಾಗೂ ಇಂಗ್ಲೆಂಡಿನಲ್ಲಿ ಕಿಡ್ನಿ ಕಸಿ ಪರಿಣಿತ ಹೊಂದಿದ ಡಾ. ಅವಿನಾಶ ಓದುಗೌಡರ ಮಾತನಾಡಿ, ಎಲ್ಲ ವಿಷಯಗಳು ಕುರಿತಾಗಿ ವಿವರಣೆ ಕೊಟ್ಟರು. ಹಾಗೂ ರೋಗಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯಲ್ಲಿ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಸಾಜಿದ್ ಮುಧೋಳ, ಡಾ. ನಿಶಿಕಾಂತ ಗುಜ್ಜರ್, ಡಾ. ಸುರೇಂದ್ರ ಅಗರ್ವಾಲ್, ಕಾಲೇಜಿನ ಸಂಯೋಜಕÀ ಡಾ. ಯುನಿಸ್ ಖಾದ್ರಿ, ಡಯಾಲಿಸಿಸ್ ಟೆಕ್ನಿಷಿಯನ್ ಆಫ್ರಿನ್ ಜಮಾದಾರ, ಆಸ್ಪತ್ರೆಯ ಪಿಆರ್‍ಒ ಶಾಹಿನ್, ನಸಿರ್ಂಗ್ ಸಿಬ್ಬಂದಿ, 50ಕ್ಕೂ ಹೆಚ್ಚು ವೈದ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯುರೋಲಜಿ ವಿಭಾಗದ ಮುಖ್ಯಸ್ಥ ಡಾ. ಸುರೇಶ ಕಾಗಲಕರ ಸ್ವಾಗತಿಸಿದರು. ಸಹಪ್ರಾಧ್ಯಾಪಕÀ ಡಾ. ಅಶೋಕ ಬಿರಾದಾರ ವಂದಿಸಿದರು.