ಸರ್ಕಾರದ ಶಿಕ್ಷಣ ನೀತಿ ವಿರೋಧಿಸಿ ಸಿಐಟಿಯು ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಜೂ.14 ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮನ ಬಂದಂತೆ ಕಾಯ್ದೆಗಳನ್ನು ರೂಪಿಸುತ್ತಿದ್ದು ಅದರಲ್ಲಿ ಹೊಸ ಶಿಕ್ಷಣ ನೀತಿಯು ಒಂದಾಗಿದೆ. ಈ ಕೂಡಲೇ 4 ವರ್ಷದೊಳಗಿನ ಮಕ್ಕಳಿಗೆ ಆರ್‍ಡಿಪಿಆರ್ ರೂಪಿಸುವ ಯಾವುದೇ ಕಾರ್ಯಕ್ರಮಗಳನ್ನು ಮತ್ತು 4 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಇಲಾಖೆ ರೂಪಿಸುವ ಯೋಜನೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶಾಸಕರಿಗೆ ಮನವಿ ಸಲ್ಲಿಸಿದರು.
 ಪಟ್ಟಣದ ಶಾಸಕರ ಕಛೇರಿ ಬಳಿ ಮನವಿಯನ್ನು ಸ್ವೀಕರಿಸಿ ಶಾಸಕ ಕೆ,ನೇಮಿರಾಜ್ ನಾಯ್ಕ್  ಅವರು ಮಾತನಾಡಿ ಕರ್ನಾಟಕದ ಯಾವುದೇ ಭಾಗದಲ್ಲೂ ಈ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸದೇ ಸರ್ಕಾರ ಕೇವಲ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಾತ್ರ ಇದನ್ನು ಅನುಷ್ಠಾನಗೊಳಿಸಲು ಹೊರಟಿರುವುದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನೇ ಮುಚ್ಚುವ ಸ್ಥಿತಿಗೆ ಸರ್ಕಾರವೇ ಕಾರಣವಾಗುತ್ತದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸದನದಲ್ಲೂ ಮತ್ತು ಸದನದ ಹೊರಗೂ ನಾವು ಹೋರಾಡುತ್ತೇವೆ.ಶೀಘ್ರವಾಗಿ ಸರ್ಕಾರ  ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಒತ್ತಾಯಿಸಿದರು. 
ಅಂಗನವಾಡಿ ಸಂಘದ ಅಧ್ಯಕ್ಷೆ ಜ್ಯೋತೇಶ್ವರಿ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಬರುವ 3 ರಿಂದ 6 ವರ್ಷದ ಮಕ್ಕಳಲ್ಲಿ 4 ರಿಂದ 6 ವರ್ಷದ ಮಕ್ಕಳು ಶಿಕ್ಷಣ ಇಲಾಖೆಗೆ ಬಂದರೆ ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಾದರೂ ಯಾರು? ಆಗ ಅಂಗನವಾಡಿ ಕೇಂದ್ರಗಳೆಲ್ಲಾ ಮುಚ್ಚಿ ಹೋಗುತ್ತವೆ. ಕೆಕೆಆರ್‍ಡಿಪಿ ಅಡಿ ಹೊಸದಾಗಿ ಪ್ರಾರಂಭವಾಗಿರುವ ಎಲ್‍ಕೆಜಿ-ಯುಕೆಜಿಯನ್ನು ಪ್ರಾರಂಭಿಸುವ ಆದೇಶವನ್ನು ಈ ಕೂಡಲೇ ನಿಲ್ಲಿಸಬೇಕು 1008 ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಅಲ್ಲಿಯೇ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಶಿಕ್ಷಣ ಇಲಾಖೆ ಅಡಿಯಲ್ಲಿ ಇರುವ ಎಲ್‍ಕೆಜಿ-ಯುಕೆಜಿ ಮತ್ತು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳ ಒಟ್ಟು ಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕು. ಈ ಅಧ್ಯಯನದ ವರದಿ ಬರುವ ತನಕಾ ಶಿಕ್ಷಣ ಇಲಾಖೆ ಹೊಸದಾಗಿ ಇಸಿಸಿಡಿಯನ್ನು ಪ್ರಾರಂಭಿಸದಂತೆ ಸೂಚಿಸಬೇಕು ಎಂದರು.
ಇದೇ ವೇಳೆ ಪಟ್ಟಣದ ಈಶ್ವರ ದೇವಸ್ಥಾನದಿಂದ ಆರಂಭವಾದ ಅಂಗನವಾಡಿ ನೌಕರರ ಪ್ರತಿಭಟನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿಡಿಪಿಒ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಗೀತಾ, ಖಜಾಂಚಿ ಇಮಾಮ್‍ಬೀ, ಮಾಬುಲ್ಲಿ, ಉಪಾಧ್ಯಕ್ಷೆ ಭಾಗ್ಯ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
One attachment • Scanned by Gmail