ಕಿನಲ್ಲಿ ಹಾರಿದು ಹೋಗುವ ತುಂಗಭದ್ರ ನದಿಯಲ್ಲಿ ಮೊಸಳೆ ಕಾಟ, ಹಸು ಬಲಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.14: ತಾಲೂಕಿನ ನಡಿವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉಡೇಗೋಳ ಗ್ರಾಮದ ಹತ್ತಿರ ತುಂಗಭದ್ರ ನದಿಯಲ್ಲಿ ಹಸುವೊಂದನ್ನು ಮೊಸಳೆಗಳು ಎಳೆದೊಯ್ದಿದ್ದು, ಈ ಭಾಗದಲ್ಲಿ 30ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿಕೊಂಡಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನಲ್ಲಿ ಹರಿಯುವ ತುಂಗಭದ್ರ ನದಿಪಾತ್ರದಲ್ಲಿ ಉತ್ತಮ ಮಳೆಯಾಗಿದ್ದು, ನದಿಯಲ್ಲಿ ನೀರು ಹರಿಯುತ್ತಿದ್ದು, ನದಿಯ ಉದ್ದಕ್ಕೂ ನೀರಿನ ಹರಿವು ಹೆಚ್ಚಾಗಿದ್ದು, ನಡಿವಿ ಮತ್ತು ಉಡೇಗೋಳ ಗ್ರಾಮದ ಮಧ್ಯದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿ ಗ್ರಾಮಸ್ಥರ ದನಕರುಗಳು ಮೇವು ಮೇಯಲು ನದಿ ದಂಡೆಯಲ್ಲಿರುವ ಜಮೀನುಗಳಿಗೆ ತೆರಳುತ್ತಿದ್ದು, ಬುಧವಾರ ಸಂಜೆ ಮೇವು ಮೇಯಲು ತೆರಳಿದ್ದ ಹಸುವೊಂದನ್ನು ಮೊಸಳೆಗಳ ಗುಂಪು ದಾಳಿ ಮಾಡಿ ನದಿ ಮಧ್ಯದಲ್ಲಿ ಎಳೆದೊಯ್ದು ತಿನ್ನುವ ದೃಶ್ಯ ಕಂಡು ಬಂದಿದ್ದು, ಗ್ರಾಮಸ್ಥರಲ್ಲಿ ಭಯ ಆರಂಭವಾಗಿದೆ.
ಕಳೆದ ವರ್ಷ ದನಗಳ ಹಿಂಡಿನೊಂದಿಗೆ ನದಿಯನ್ನು ದಾಟಿ ಜಮೀನಿಗೆ ಹೋಗುತ್ತಿದ್ದ ನಿಟ್ಟೂರು ಗ್ರಾಮದ ಯುವಕನ ಮೇಲೆ ಮೊಸಳೆಯೊಂದು ದಾಳಿ ಮಾಡಿದ ಪರಿಣಾಮ ಸಾವನ್ನಪ್ಪಿದ್ದ ಘಟನೆ ನಡೆದಿದ್ದು, 2 ದಿನಗಳ ಹಿಂದೆ ಉಡೇಗೋಳ ಭಾಗದಲ್ಲಿ ಹಸುವೊಂದನ್ನು ಮೊಸಳೆಗಳು ತಿನ್ನುವ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಆದರೆ ಬುಧವಾರ ಮತ್ತೊಂದು ಹಸುವಿನ ಮೇಲೆ ಮೊಸಳೆಗಳ ಹಿಂಡು ದಾಳಿ ಮಾಡಿದ್ದನ್ನು ಕಂಡ ಉಡೇಗೋಳ ಗ್ರಾಮಸ್ಥರು ನದಿ ದಂಡೆಗೆ ಯಾರು ತೆರಳದಂತೆ ನಡಿವಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬುಧವಾರ ಸಂಜೆ ಟಾಂಟಾಂ ಹಾಕಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ಮೊಸಳೆದಾಳಿಗೆ ತುತ್ತಾದ ಹಸುವಿನ ಮಾಲಿಕರು ಯಾರು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ನಡಿವಿ ಮತ್ತು ಉಡೇಗೋಳ ಗ್ರಾಮದ ನಡುವೆ ಹರಿಯುವ ತುಂಗಭದ್ರ ನದಿಯಲ್ಲಿ ಮೊಸಳೆಗಳು ಗುಂಪು ಗುಂಪಾಗಿ ಕಾಣಿಸಿಕೊಂಡಿದ್ದು, ಸಾರ್ವಜನಿಕರಿಗೆ ನದಿ ದಂಡೆಗೆ ತೆರಳದಂತೆ ಮತ್ತು ದನಕರುಗಳನ್ನು ನದಿಕಡೆಗೆ ಬಿಡದಂತೆ ಮಾಹಿತಿ ನೀಡಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಉಮಾ ಸತ್ಯನಾರಾಯಣ ತಿಳಿಸಿದ್ದಾರೆ. 
ಮೊಸಳೆಗಳು ಹೆಚ್ಚಾಗಿರುವುದರಿಂದ ಗ್ರಾಮಸ್ಥರು ನದಿ ದಂಡೆಗೆ ತೆರಳಬಾರದು, ಈ ಬಗ್ಗೆ ಟಾಂಟಾಂ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪಿ.ಡಿ.ಒ. ಅನ್ನಪೂರ್ಣ ತಿಳಿಸಿದ್ದಾರೆ.
ತುಂಗಭದ್ರ ನದಿ ಪಾತ್ರದಲ್ಲಿರುವ ಎಲ್ಲಾ ಗ್ರಾಮಗಳಲ್ಲಿ ಮೊಸಳೆಗಳು ಇರುವ ಬಗ್ಗೆ ಮಾಹಿತಿ ಫಲಕವನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಸಿರುಗುಪ್ಪ ವಲಯ ಅರಣ್ಯಾಧಿಕಾರಿ ಗಿರೀಶ್ ತಿಳಿಸಿದ್ದಾರೆ.