ಪೌಷ್ಟಿಕ ಆಹಾರ ಸೇವನೆಯಿಂದ ಗರ್ಭಿಣಿಯರು, ಕಿಶೋರಿಯರ ಆರೋಗ್ಯ  ಸದೃಢ – ಓಬಣ್ಣ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.14 :- ಗರ್ಭಿಣಿಯರು ಹಾಗೂ ಕಿಶೋರಿಯರು ರಕ್ತಹೀನತೆಯಿಂದ ಬಳಲದೆ ಹಸಿರು ತರಕಾರಿ, ಸೊಪ್ಪು, ಮೊಟ್ಟೆಯಂತಹ  ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ದೈಹಿಕ, ಶಾರೀರಿಕ  ಹಾಗೂ ಮಾನಸಿಕ  ಸದೃಢರಾಗುವಂತೆ ಆರೋಗ್ಯ ಇಲಾಖೆಯ ಆರ್ ಕೆ ಎಸ್ ಕೆ ವಿಭಾಗದ ಆಪ್ತಸಮಾಲೋಚಕ ಓಬಣ್ಣ ತಿಳಿಸಿದರು.
ಪಟ್ಟಣದ ಆಜಾದ್ ನಗರದ ಅಂಗನವಾಡಿ ಬಿ ಕೇಂದ್ರದಲ್ಲಿ ಗುರುವಾರ  ಆಯೋಜಿಸಿದ ಪೌಷ್ಟಿಕ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಬಾಯಿ ರುಚಿಗೆ ಬೇಕರಿ ಪದಾರ್ಥ ಆಹಾರವಾಗಿ  ಬಳಸಿಕೊಳ್ಳದೆ ತರಕಾರಿ ಸೊಪ್ಪು ಹಣ್ಣುಗಳನ್ನು ಹೆಚ್ಚಾಗಿ  ಬಳಸಿ  ಆಹಾರ  ಸೇವನೆ ಮಾಡುವುದರಿಂದ ರಕ್ತದ ಅಂಶ ವೃದ್ಧಿಯಾಗುತ್ತದೆ ಅಲ್ಲದೆ ನುಗ್ಗೆ ಸೊಪ್ಪು ಸೇವನೆಯಿಂದ ಅದರಲ್ಲಿರುವ ಖನಿಜಾoಶದಿಂದ ಮಗುವಿನ ಮೂಳೆಗಳು ಸದೃಢವಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಸುರಕ್ಷಾಧಿಕಾರಿ ಗಿರಿಜಾ ಅಂಜಿನಪ್ಪ ಮಾತನಾಡಿ ಮಹಿಳೆಯರು, ಗರ್ಭಿಣಿ ಸ್ತ್ರೀಯರು ಹಾಗೂ ಕಿಶೋರಿಯರು ಆರೋಗ್ಯದ ಕಡೆ ಗಮನಹರಿಸಿ ಆರೋಗ್ಯ ಇಲಾಖೆಯಿಂದ ಸಲಹೆ ಸೂಚನೆ ಪಡೆದು  ಉತ್ತಮ ಆಹಾರ ಸೇವನೆ ಮಾಡುವುದರಿಂದ ರಕ್ತಹೀನತೆಯಿಂದ ಬಳಲದೇ ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗುತ್ತದೆ ಮತ್ತು ಮಗುವಿಗೆ ತಾಯಿ ಹಾಲೇ ಶ್ರೇಷ್ಠವಾಗಿದ್ದು ಮಕ್ಕಳ ಆರೋಗ್ಯಕ್ಕೆ ತಾಯಿ ಎದೆಹಾಲು ಕುಡಿಸುವುದರಿಂದ ಮಗುವು ಸದೃಢವಾಗಿ ಬೆಳೆಯಲು ಸಹಾಯಕವಾಗುತ್ತದೆ ಎಂದು ತಾಯಿ ಹಾಲಿನ ಮಹತ್ವ ಕುರಿತು ತಿಳಿಸಿದರು.
ಹೆಚ್ ಐಒ ಸುನೀತ ಮಾತನಾಡಿ ಗರ್ಭಿಣಿ ಸ್ತ್ರೀಯರು ಹಾಗೂ ಕಿಶೋರಿಯರು ರಕ್ತಹೀನತೆಯಿಂದ ಬಳಲದೇ ಐಎಫ್ ಎ ಮಾತ್ರೆಗಳನ್ನು ಸೇವಿಸುವಂತೆ ಹಾಗೂ ಪೌಷ್ಟಿಕ ಆಹಾರದ ಮಹತ್ವ ತಿಳಿದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಅಂಗನವಾಡಿ ಬಿ ಕೇಂದ್ರದ ಕಾರ್ಯಕರ್ತೆ ಮಹಾಂತಮ್ಮ,  ಆಶಾ ಕಾರ್ಯಕರ್ತರಾದ   ಉಮಾ ಲತಾ ಮತ್ತು ಗರ್ಭಿಣಿ ಮಹಿಳೆಯರು ತಾಯಂದಿರು ಕಿಶೋರಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.