ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ ಸುಧಾರಣೆಯಾಗಬೇಕು –ಆಯೋಗದ ರಾಷ್ಟ್ರೀಯ ಅಧ್ಯಕ್ಷ ಎಂ.ವೆಂಕಟೇಶನ್
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ (ವಿಜಯನಗರ) ಜೂ14: ಸಫಾಯಿ ಕರ್ಮಚಾರಿಗಳು ಸರ್ಕಾರದ ಮೂಲಸೌಕರ್ಯಗಳನ್ನು ಬಳಸಿಕೊಂಡು ತಮ್ಮ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಫಾಯಿ ಕರ್ಮಚಾರಿ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ತಿಳಿಸಿದರು.
ಹೊಸಪೇಟೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯ ಮುನ್ನ ಸಫಾಯಿ ಕರ್ಮಚಾರಿಗಳು ವಾಸಿಸುವ ಪ್ರದೇಶಗಳಾದ ಗಾಂಧಿನಗರ, ಇಂದಿರಾನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಮಾತನಾಡಿದ ಅವರು ಸರ್ಕಾರ ಏನೇಲ್ಲಾ ಸೌಕರ್ಯಗಳನ್ನು ನೀಡುತ್ತಿದೆ ಅವುಗಳ ಮಾಹಿತಿ ಅರಿಯಬೇಕು, ಪ್ರಯೋಜನ ಪಡೆಯಬೇಕು ಆಮೂಲಕ ಆರ್ಥಿಕ, ಸಾಮಾಜಿಕ ಪ್ರಗತಿಯನ್ನು ಸಾಧಿಸಬೇಕು ಎಂದರು.
ಇಂದಿರಾನಗರ ಹಾಗೂ ಗಾಂಧಿನಗರದಲ್ಲಿ ಒಂದು ಸಣ್ಣ ಮಳೆಬಂದಾಗಲು ಆಗುವ ಭವಣೆಯನ್ನು ಸ್ಥಳಿಯರಿಂದ ಮಾಹಿತಿ ಪಡೆದರು ಕಳೆದ ಮೂರ ನಾಲ್ಕು ದಿನಗಳಿಂದ ಮಳೆಯಾದ ಹಿನ್ನೆಲೆಯಲ್ಲಿ ಖುದ್ಧ ಸ್ಥಿತಿಯನ್ನು ಕಣ್ಣಾರೆ ಕಾಣುವಂತಾಗಿದ್ದು ಭೇಟಿ ಸಫಾಯಿ ಕರ್ಮಚಾರಿಗಳ ವಾಸ್ತವ ಸ್ಥಿತಿ ಅರಿಯಲು ಸಹಕಾರಿಯಾಯಿತು ಎಂದು ತಾಳ್ಮೆಯಿಂದ ಅವರ ಅಹವಾಲುಗಳನ್ನು ಆಲಿಸಿದರು. ಸ್ಲಂ ಜನರ ತೊಂದರೆಗಳಿಗೆ ಸ್ಪಂಧಿಸುವ ರಾಮಚಂದ್ರ, ಜಗನ್, ಸ್ಥಳಿಯ ನಿವಾಸಿಗಳು ಆಗಿರುವ ಸಫಾಯಿ ಕರ್ಮಚಾರಿಗಳು ತಮ್ಮ ಭವಣೆಗಳ ಮಾಹಿತಿ ನೀಡಿದರು.
ಸಫಾಯಿ ಕರ್ಮಚಾರಿಗಳ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು, ಸಫಾಯಿ ಕರ್ಮಚಾರಿ ಸಂಘದ ನಾಯಕರುಗಳು ಮತ್ತು ಸಫಾಯಿ ಕರ್ಮಚಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಮ್ಮ ಅಹವಾಲುಗಳಿಗೆ ಸ್ಪಂದಿಸಲು ಸೂಚಿಸುವುದಾಗಿ ತಿಳಿಸಿದ ಅವರು ನಾವು ಬದಲಾಗುವ ಮೂಲಕ ವ್ಯವಸ್ಥೆಯ ಸುಧಾರಣೆಗೆ ಮುಂದಾಗುವಂತೆ ಸೂಚಿಸುವುದಾಗಿಯು ತಿಳಿಸಿದರು.
ಜಿಲ್ಲಾ ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ, ಪೌರಾಯುಕ್ತ ಚಂದ್ರಪ್ಪ ಪ್ರದೇಶದ ವಾಸ್ತವಸ್ಥಿತಿಯನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ಮನವರಿಕೆ ಮಾಡಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ ಸೇರಿದಂತೆ ಪೊಲೀಸ್ ಇಲಾಖೆಯ ಹಾಗೂ ಇತರೆ ಇಲಾಖಾಧಿಕಾರಿಗಳು ನಗರಸಭೆಯ ಸಿಬ್ಬಂದಿಗಳು. ಸ್ಥಳೀಯ ಸಂಘಟನೆಗಳ ಮುಖಂಡರು ಹಾಜರಿದ್ದರು.