ಬಕ್ರಿದ್ ಹಬ್ಬ: ಜಿಲ್ಲಾ ಮಟ್ಟದ ಶಾಂತಿ ಸಭೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ) ಜೂ14: ಜೂನ್ 17ರಂದು ನಡೆಯಲಿರುವ ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಶಾಂತಿ ಸಭೆಯು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಅವರ ಸಮ್ಮುಖದಲ್ಲಿ ಗುರುವಾರ ಶಾಂತಿ ಸಭೆ ನಡೆಯಿತು.
ಜಿಲ್ಲಾಡಳಿತ ಭವನದಲ್ಲಿನ ಆಡಿಟೋರಿಯಂ ಹಾಲ್‍ನಲ್ಲಿ ನಡೆದ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಿದರು. 
ಈದ್ಗಾ ಮೈದಾನವನ್ನು ಶುಚಿಗೊಳಿಸಬೇಕು. ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಮುಸಲ್ಮಾನ ಬಂಧುಗಳು ಅಂದು ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಸಹಕರಿಸಬೇಕು ಎಂದು ಅಂಜುಮನ್ ಸಮಿತಿಯ ಅಧ್ಯಕ್ಷ ಇಮಾನ್ ನಿಯಾಜ್ ಹಾಗೂ ಮಾತನಾಡಿದ ಮುಖಂಡರು ಕೋರಿದರು.
ಬಕ್ರಿದ್ ಹಬ್ಬವು ಇದುವರೆಗೆ ವಿಜಯನಗರ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದೆ. ಪ್ರಮುಖ ರಸ್ತೆಯಲ್ಲಿ ಈದ್ಗಾ ಮೈದಾನ ಇರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಶಿವಪ್ಪನಾಯಕ ಕೂಡ್ಲಿಗಿ ಸಲಹೆ ಮಾಡಿದರು. ಇದುವರೆಗೆ ಜಿಲ್ಲೆಯಲ್ಲಿ ನಾವೆಲ್ಲರೂ ಸೇರಿ ಎಲ್ಲಾ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಣೆ ಮಾಡಿದ್ದೇವೆ. ಯಾವುದೇ ಅವಘಡಗಳಿಗೆ ಅವಕಾಶವಿರದ ಹಾಗೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುತ್ತೇವೆ ಎಂದು ಕಮಲಾಪುರದ ಮೆಹಬೂಬ ಪಾಷ ತಿಳಿಸಿದರು.
ಕೊಟ್ಟೂರಿನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಗಮನ ಹರಿಸಿ ಪ್ರಾರ್ಥನಾ ಮಂದಿರದ ರಸ್ತೆಗಳನ್ನು ಸರಿಪಡಿಸಿಕೊಡಬೇಕು ಎಂದು ಅಲ್ಲಿನ ಮುಖಂಡರು ಮನವಿ ಮಾಡಿದರು.
ಸಾರ್ವಜನಿಕರ ಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸೇರಿದಂತೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲಾಗುವುದು. ಸಭೆಯಲ್ಲಿ ವಿವಿಧ ಮುಖಂಡರು ನೀಡಿದ ಸಲಹೆಯಂತೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಹಬ್ಬದ ದಿನ ಮಳೆಯಾದಲ್ಲಿ ಸೂಕ್ತವಾದ ವ್ಯವಸ್ಥೆ ಮಾಡಬೇಕು. ಸಭೆಯಲ್ಲಿ ನಿರ್ದೇಶನ ನೀಡಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನಾನಾ ವ್ಯವಸ್ಥೆಗಳನ್ನು ಕಲ್ಪಿಸಲು ಕಾರ್ಯಪ್ರವೃತ್ತರಾಗಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ತಾಲೂಕುಮಟ್ಟದಲ್ಲಿ ಹಾಗೂ ಠಾಣಾ ಮಟ್ಟದದಲ್ಲಿ ಶಾಂತಿ ಸಭೆಗಳು ನಡೆಯುತ್ತಿವೆ. ಶಾಂತಯುತವಾಗಿ ಹಬ್ಬ ನಡೆಯುವಂತೆ ಜಿಲ್ಲೆಯ ಸಾರ್ವಜನಿಕರು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
16-18 ವಯಸ್ಸಿನೊಳಗಿನ ಕೆಲವು ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಷಯಗಳನ್ನು ಹರಿಬಿಟ್ಟು ಅದರಿಂದ ಅವಘಡಗಳು ಸಂಭವಿಸುತ್ತವೆ. ಯಾವುದೇ ಧರ್ಮದ ಯುವಕರಿರಲಿ ಅಂತವರಿಗೆ ಹಿರಿಯ ನಾಗರಿಕರು ತಿಳಿ ಹೇಳಬೇಕು. ಶಾಂತಿ ಕದಡದ ಹಾಗೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನುರಾಧ ಜಿ., ಸಹಾಯಕ ಆಯುಕ್ತರಾದ ಮೊಹಮ್ಮದ್ ಅಲಿ ಅಕ್ರಮ ಷಾಹ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಲೀಂ ಪಾಶಾ ಸೇರಿದಂತೆ ಪೊಲೀಸ್ ಇಲಾಖೆಯ ಹಾಗೂ ಇತರೆ ಇಲಾಖಾಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.