ಅನ್ನದಾತನಿಗೆ ಚೈತನ್ಯ ತಂದ ಮುಂಗಾರು ಮಳೆಜಿಲ್ಲೆಯಲ್ಲಿ ಶೇ.23 ರಷ್ಟು ಬಿತ್ತನೆ : ಕೃಷಿ ಚಟುವಟಿಕೆಗಳು ಚುರುಕು
ಅನಂತ ಜೋಶಿ
ಹೊಸಪೇಟೆ (ವಿಜಯನಗರ), ಜೂ.14: ಕಳೆದ ಒಂದು ವರ್ಷದಿಂದ ಆವರಿಸಿದ್ದ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ರೈತಾಪಿ ಜನರಲ್ಲಿ ಈ ಬಾರಿಯ ಮುಂಗಾರು ಪೂರ್ವ ಮಳೆ ಅಬ್ಬರ ಹೊಸ ಚೈತನ್ಯ ಮೂಡಿಸಿ. ಕಳೆದೊಂದು ವಾರದಿಂದ ಮಳೆ ಜೋರಾಗಿದ್ದು, ಈ ವರೆಗೆ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ರೈತರು ಬಿತ್ತನೆಯತ್ತ ಮುಖ ಮಾಡಿದ್ದಾರೆ. ಪರಿಣಾಮ ಜಿಲ್ಲೆಯ ಒಟ್ಟು ಗುರಿಯ ಶೇ.23 ರಷ್ಟು ಬಿತ್ತನೆಯಾಗಿರುವುದು ಈ ಬಾರಿ ಮುಂಗಾರು ಕೈಹಿಡಿಯುವ ಆಶಾಭಾವ ಮೂಡಿಸಿದೆ.
ಎರಡು ವರ್ಷಗಳಿಂದ ಅತಿವೃಷ್ಠಿ, ಅನಾವೃಷ್ಠಿಯಿಂದಾಗಿ ಜಿಲ್ಲೆಯ ರೈತರು ಕೈಸುಟ್ಟುಕೊಂಡಿದ್ದಾರೆ. 2022ರಲ್ಲಿ ಸಕಾಲಕ್ಕೆ ರೈತರ ಕೈಹಿಡಿಯದ ಮುಂಗಾರು,  ಆನಂತರ ಹಿಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಅತಿವೃಷ್ಠಿಯ ಪರಿಸ್ಥಿತಿ ಉಂಟಾಯಿತು. ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಭೀಕರ ಬರ ಆವರಿಸಿತು. ಕಳೆದ ಮಾರ್ಚ್‍ನಿಂದೀಚೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಬರ ಎನ್ನುವಂತಾಯಿತು. ಬೇಸರಗೊಂಡಿದ್ದ ಕೃಷಿಕರಿಗೆ ಈ ಬಾರಿಯ ಮುಂಗಾರು ಪೂರ್ವದ ಮಳೆ ಹೊಸ ಚೈತನ್ಯ ಮೂಡಿಸಿ ದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟಿವಟಿಕೆಗಳು ಚುರುಕು ಪಡೆದಿವೆ.
ಬಯಲು ಸೀಮೆಯಲ್ಲಿ ಬಿತ್ತನೆ ಹೆಚ್ಚು:
ವಿಜಯನಗರ ಜಿಲ್ಲೆಯು 59185 ಹೆಕ್ಟರ್ ನೀರಾವರಿ, 235417 ಹೆಕ್ಟರ್ ಮಳೆ ಆಶ್ರಿತ ಸೇರಿದಂತೆ ಒಟ್ಟು 2.94 ಲಕ್ಷ ಹೆಕ್ಟರ್ ಬಿತ್ತನೆ ಪ್ರದೇಶವನ್ನು ಹೊಂದಿದೆ. ಆ ಪೈಕಿ ಈಗಾಗಲೇ 10023 ಹೆಕ್ಟರ್ ನೀರಾವರಿ, 59267 ಹೆಕ್ಟರ್ ಬಯಲು ಸೀಮೆ ಸೇರಿ ಒಟ್ಟಾರೆ 69290 ಹೆಕ್ಟರ್ ಪ್ರದೇಶದಲ್ಲಿ ಬಿತ್ತೆನೆಯಾಗಿದ್ದು, ಶೇ.23.52 ರಷ್ಟು ಸಾಧನೆಯಾಗಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಶೇ.41.64, ಹಡಗಲಿಯಲ್ಲಿ ಶೇ.23.12, ಹೊಸಪೇಟೆ, ಎಚ್.ಬಿ.ಯಲ್ಲಿ ಶೇ.17, ಕೊಟ್ಟೂರು ಮತ್ತು ಕೂಡ್ಲಿಗಿಯಲ್ಲಿ ಶೇ.10 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಮೆಕ್ಕೆಜೋಳ 1,95,754 ಹೆ. ಗುರಿಯಲ್ಲಿ 57,728 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.
ಇನ್ನುಳಿದಂತೆ ಭತ್ತ, ಜೋಳ, ತೊಗರಿ, ಸೂರ್ಯಕಾಂತಿ, ಶೇಂಗಾ ಮತ್ತಿತರೆ ಬೆಳೆಗಳ ಬಿತ್ತನೆ ಕಾರ್ಯ ಬರದಿಂದ ಸಾಗಿದೆ. ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡಿದ್ದ ಜಮೀನುಗಳಲ್ಲಿ ಈಗಾಗಲೇ ಬಿತ್ತನೆ ಚಿರುಗುರುತ್ತಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಬಿತ್ತನೆಗೆ ಪೂರಕ ವಾತಾವರಣವಿದ್ದು, ಮುಂದಿನ ಒಂದು ವಾರದಲ್ಲಿ ಶೇ.100 ರಷ್ಟು ಬತ್ತನೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.
ಜಿಲ್ಲೆಯಲ್ಲಿ ಹೆಚ್ಚುವರಿ ಮಳೆ:
ಕಳೆದ ಎರಡು ವರ್ಷಗಳಿಂದ ಹವಾಮಾನ ವೈಪರಿತ್ಯದಿಂದ ಜಿಲ್ಲೆಯಲ್ಲಿ ವಿವಿಧ ಬೆಳೆಗಳು ಅನ್ನದಾತನ ಕೈಹಿಡಿಯಲಿಲ್ಲ. ಆದರೆ, ಈ ಬಾರಿ ಮುಂಗಾರು ಪೂರ್ವದಲ್ಲೇ ಮಳೆ ಚುರುಕುಗೊಂಡಿದೆ. ಕಳೆದ ಮಾರ್ಚ್ 1ರಿಂದ ಮೇ 31ರ ವರೆಗೆ ಸುರಿಯಬೇಕಿದ್ದ 96.9 ಮಿ.ಮೀ. ಪೈಕಿ 117.4 ಮಿ.ಮೀ. ರಷ್ಟು ಮಳೆಯಾಗಿದೆ. ಜೂ.3 ರಿಂದ 9ರ ವರೆಗೆ ವಾಡಿಕೆ 23.6 ಮಿ.ಮೀ. ರಲ್ಲಿ 62 ಮಿ.ಮೀ. ಮಳೆಯಾಗಿದೆ.
ಹೀಗಾಗಿ ರೈತರ ಬೇಡಿಕೆಗೆ ಅನುಗುಣವಾಗಿ ಕೃಷಿ ಇಲಾಖೆಯೂ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಬಿತ್ತನೆ ಬೀಜ ವಿತರಿಸುತ್ತಿದೆ. ತಜ್ಞರ ಹೇಳಿಕೆಯಂತೆ ಮುಂಗಾರು ಮಳೆ ಸಕಾರತ್ಮಕವಾಗಿದ್ದು, ರೈತರಲ್ಲಿ ಉತ್ತಮ ಬೆಳೆಯ ನಿರೀಕ್ಷೆ ಹೆಚ್ಚಿಸಿದೆ.
ಈ ಬಾರಿ ಮುಂಗಾರು ಮಳೆ ಉತ್ತಮ ವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೃಷಿ ಕಾರ್ಯಗಳು ಬರದಿಂದ ಸಾಗಿವೆ. ರೈತರ ಬೇಡಿಕೆಗೆ ತಕ್ಕಂತೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ. ಆದರೆ, ಖಾಸಗಿ ಸಂಸ್ಥೆಗಳು ಸರಬರಾಜು ಮಾಡುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಗಳ ಗುಣಮಟ್ಟದ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸಬೇಕು.
-ಸಿ.ಎ.ಗಾಳೆಪ್ಪ, ರೈತ ಮುಖಂಡ.