ಗುಡಿಸಲು ನಿವಾಸಿಗಳ ಮರು ಸರ್ವೇಗೆ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.14:- ಹೆಬ್ಬಾಳು ಕಾಲೋನಿಯ ಗುಡಿಸಲು ನಿವಾಸಿಗಳನ್ನು ಮರು ಸರ್ವೇ ಮಾಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕಳೆದ 45 ವರ್ಷಗಳಿಂದ ಹೆಬ್ಬಾಳು ಕಾಲೋನಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ಮುಡಾ ನಿವೇಶನದಲ್ಲಿ ವಾಸುತ್ತಿದ್ದ 80 ಕುಟುಂಬಗಳಲ್ಲಿ 34 ಮನೆಗಳನ್ನು ನರ್ಮ್ ಯೋಜನೆಯ ಅಡಿಯಲ್ಲಿ ಬಿಎಂಶ್ರೀ ನಗರದ ಜ್ಞಾನಲೋಕದಲ್ಲಿ 2009-10ರಲ್ಲಿ ಮನೆಗಳನ್ನು ನೀಡಲಾಗಿದೆ. ಆದರೆ, ಕೆಲವು ಕುಟುಂಬಗಳ ಹೆಸರನ್ನು ಕೈ ಬಿಟ್ಟ ಕಾರಣ ಮನೆಗಳಿಂದ ವಂಚಿತವಾಗಿ ಇನ್ನೂ ಗುಡುಸಿನಲ್ಲಿ ವಾಸಿಸುವ ದುಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಚೆಗೆ ತಾಲೂಕು ಆಡಳಿತ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸರ್ವೇ ತಂಡ ಕಾಲೋನಿಗೆ ಭೇಟಿ ನೀಡಿ ಅಳತೆ ಮಾಡಿ ಗುಡಿಸಲಿನಲ್ಲಿರುವ ಕೆಲವರ ಹೆಸರನ್ನು ಮನೆ ವಿತರಿಸಲು ಪರಿಗಣಿಸಿದ್ದಾರೆ. ಆದರೆ, ಸ್ಥಳದಲ್ಲಿ ಇಲ್ಲದ ಕುಟುಂಬಗಳನ್ನು ಕೈ ಬಿಟ್ಟಿದ್ದಾರೆ. ದಿನಗೂಲಿ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರಣ ಇನ್ನೂ ಕೆಲವರನ್ನು ಪರಿಗಣಿಸಿಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಸ್ಥಳ ಪರಿಶೀಲನೆ ನಡೆಸಿದ ಹಿನ್ನೆಲೆಯಲ್ಲಿ ಈ ರೀತಿಯಾಗಿದೆ. ಹೀಗಾಗಿ ಈಗ ಕೈ ಬಿಟ್ಟಿರುವ ಕುಟುಂಬಗಳ ಹೆಸರನ್ನು ಪರಿಗಣಿಸಿ ಮರು ಸರ್ವೆ ಮಾಡಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ನಿಂಗರಾಜ್ ಮಲ್ಲಾಡಿ, ಕೆ.ನಂಜಪ್ಪ ಬಸವನಗುಡಿ, ಸಿ.ಮೋಹನ್ ಕುಮಾರ್, ಚಂದ್ರು, ಅರವಿಂದ, ಮಹೇಶ್ ರಂಜೀತ್, ರಾಮಕುಮಾರ್, ಶೋಭಾ, ಸುಕನ್ಯಾ, ಲಕ್ಷ್ಮಿ, ಕೆ.ನಿಂಗಮ್ಮ, ಸರೋಜಮ್ಮ, ಶ್ರುತಿ, ಮಂಜುಳಾ, ವಿನಾಯಕ, ಗೌರಿ, ಸುಮ, ಪ್ರದೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.