ಜೆಎಸ್‍ಎಸ್ ಅಕಾಡೆಮಿಗೆ ಮೊದಲ ರ್ಯಾಂಕ್
ಸಂಜೆವಾಣಿ ನ್ಯೂಸ್
ಮೈಸೂರು: ಜೂ.14:- ನಗರದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಗೆ ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ರ್ಯಾಂಕಿಂಗ್ -2024ರಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳು ವಿಷಯಕ್ಕೆ ಮೊದಲ ರ್ಯಾಂಕ್ ಲಭಿಸಿದೆ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರಮಠ ತಿಳಿಸಿದರು.
ನಗರದ ಜೆಎಸ್‍ಎಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಶ್ರೀ ರಾಜೇಂದ್ರ ಶತಮಾನೊತ್ಸವ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥೈಲ್ಯಾಂಡಿನ ಬ್ಯಾಂಕಾಂಕ್‍ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಸಂಸ್ಥೆಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಈ ಪ್ರಶಸ್ತಿಗಾಗಿ 115 ದೇಶಗಳಿಂದ 497 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದವು. ದೇಶದಿಂದ ಸುಮಾರು 115 ವಿವಿಗಳು ಪಾಲ್ಗೊಂಡಿದ್ದೂ, ಇದರಲ್ಲಿ ಕರ್ನಾಟದಿಂದ 12 ವಿಶ್ವವಿದ್ಯಾನಿಲಯಗಳು ಭಾಗವಹಿಸಿದ್ದವು. ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 9 ವಿಭಾಗದಲ್ಲಿ ಜೆಎಸ್‍ಎಸ್ ಸಂಸ್ಥೆ ಸ್ಪರ್ಧೆ ಮಾಡಿತ್ತು. ಅದರಲ್ಲಿ 7 ವಿಭಾಗದಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದರು.
ಜೆಎಸ್‍ಎಸ್ ಉನ್ನತ ಶಿಕ್ಷಣ ಸಂಸ್ಥೆ ಮತ್ತು ಸಂಶೋಧನಾ ಅಕಾಡೆಮಿಯ ಬೋಧನಾ ಗುಣಮಟ್ಟ, ಬುಡಕಟ್ಟು ಜನಾಂಗದ ಆರೋಗ್ಯದ ಬಗ್ಗೆ ನಡೆಸಿರುವ ಸಂಶೋಧನೆ ಮತ್ತು ಆರೋಗ್ಯದ ಅರಿವು ಮತ್ತು ಸೇವೆಯ ಅಂಶಗಳು ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಸಹಾಯಕಾರಿಯಾಗಿವೆ. ಇದಲ್ಲದೇ ಕೈಗೆಟುಕುವ ಮತ್ತು ಶುದ್ಧ ಶಕ್ತಿ ವಿಷಯದಲ್ಲಿ 12ನೇ ಸ್ಥಾನ, ಬಡತನ ನಿರ್ಮೂಲನೆ ವಿಷಯದಲ್ಲಿ 21ನೇ ಸ್ಥಾನ, ಭೂಮಿಯ ಮೇಲಿನ ಜೀವನ ವಿಷಯದಲ್ಲಿ 49ನೇ ಸ್ಥಾನ, ಶುದ್ಧ ಜಲ ಮತ್ತು ನೈರ್ಮಲ್ಯ ವಿಷಯದಲ್ಲಿ 60ನೇ ಸ್ಥಾನ ಹಾಗೂ ಜಬ್ದಾರಿಯುತ ಉತ್ಪಾದನೆ ಮತ್ತು ಬಳಕೆ ವಿಷಯದಲ್ಲಿ 78ನೇ ಸ್ಥಾನ ಗಳಿಸಿದೆ ಎಂದು ಅವರು ತಿಳಿಸಿದರು.
2008ರಲ್ಲಿ ಪ್ರಾರಂಭವಾದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆರೋಗ್ಯಕರ ಶಿಕ್ಷಣ ಮತ್ತು ಸಂಶೋಧನೆಯನ್ನು ವರ್ಧನೆಗೊಳಿಸುವ ನಿಟ್ಟಿನಲ್ಲಿ ನಿರಂತರ ಸಮರ್ಪಣಾ ಮನೋಭಾವ ಹೊಂದಿರುವುದರೊಂದಿಗೆ ಆರೋಗ್ಯ ವಿಷಯದಲ್ಲಿ ಹೊಸ ಪರಿಹಾರಗಳನ್ನು ಉತ್ತೇಜಿಸುವಲ್ಲಿ ಇಲ್ಲಿವರೆಗೂ ಕಾಪಾಡಿಕೊಂಡು ಬಂದಿರುವ ಬದ್ಧತೆಯಿಂದ ಇಂತಹ ಪ್ರಶಸ್ತಿಗಳು ಲಭ್ಯವಾಗಿವೆ. ಸಂಸ್ಥೆ ಇನ್ನು ಮುಂದೆಯೂ ಅತ್ಯುತ್ತಮ ಮಟ್ಟದಲ್ಲಿ ತನ್ನ ಕಾರ್ಯಕ್ಷಮತೆ ಕಾಪಾಡಿಕೊಂಡು ಮುನ್ನಡೆಯಲು ಪ್ರಯತ್ನಿಸುತ್ತದೆ ಎಂದರು.
ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಮಾತನಾಡಿ, ನಮ್ಮ ಮಹಾವಿದ್ಯಾಪೀಠದ ಕೀರಿಟಕ್ಕೆ ನಮ್ಮ ಎಲ್ಲ ಸಂಸ್ಥೆಗಳು ಇಂತಹ ಪ್ರಶಸ್ತಿಗಳ ಗರಿಗಳನ್ನು ತೊಡಿಸುತ್ತಾ ಹೋಗಲಿ. ಎಲ್ಲ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಹಾಗೂ ಆರೋಗ್ಯಕ್ಕೆ ಬದ್ಧತೆಯಿಂದ ಕಾರ್ಯನಿರ್ವಹಣೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಜೆಎಸ್‍ಎಸ್ ವಿಶ್ವವಿದ್ಯಾನಿಲಯದ ಸಮಾಕುಲಾಧಿಪತಿ ಡಾ.ಬಿ.ಸುರೇಶ್ ಅಮೇರಿಕಾದಿಂದಲೇ ಅನ್‍ಲೈನ್ ಮೂಲಕ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.
2027ಕ್ಕೆ ವರುಣಾ ಕ್ಯಾಂಪಸ್ ಕಾರ್ಯಾರಂಭ:
ಮೈಸೂರು ತಾಲೂಕು ವರುಣಾ ಬಳಿಯಲ್ಲಿ ನಿರ್ಮಾಣವಾಗುತ್ತಿರುವ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕ್ಯಾಂಪಸ್ 2027ಕ್ಕೆ ಕಾರ್ಯಾರಂಭ ಮಾಡಲಿದೆ. ಅಲ್ಲಿನ ಕ್ಯಾಂಪಸ್ ಜಾಗತಿಕ ಮಟ್ಟ ಹೊಂದಿರುತ್ತದೆ.
ಸುಮಾರು 15 ಸಾವಿರ ವಿದ್ಯಾರ್ಥಿಗಳು, 2 ಸಾವಿರ ಬೋಧಕ ವರ್ಗ ಮತ್ತು 4 ಸಾವಿರ ಸಂಶೋಧನಾ ವಿದ್ಯಾರ್ಥಿಗಳಿಗೆ ಅಲ್ಲಿ ಅಧ್ಯಯನ ಮಾಡಲು ಅವಕಾಶ ಸಿಗುತ್ತದೆ. ವಿಶ್ವದ ಯಾವುದೇ ರಾಷ್ಟ್ರದ ಉತ್ತಮ ಶಿಕ್ಷಣ ಸಂಸ್ಥೆಗಳು ಅಲ್ಲಿಗೆ ಬಂದು ತಮ್ಮ ಕೇಂದ್ರವನ್ನು ತೆರೆಯಬಹುದು. ಅಲ್ಲದೇ ಆರೋಗ್ಯ, ಶಿಕ್ಷಣ, ಸಂಶೋಧನಗೆ ಸಂಬಂಧಪಟ್ಟ ಉದ್ಯಮಗಳು ಅಲ್ಲಿ ತಮ್ಮ ಕಾರ್ಯಚಟುವಟಿಕೆ ಆರಂಭಿಸಬಹುದು. ವರುಣಾ ಕ್ಯಾಂಪಸ್ ಅನ್ನು ಶಿಕ್ಷಣದೊಂದಿಗೆ ಉದ್ಯಮದ ಚಟುವಟಿಕೆ ಜೊತೆಯಾಗಿ ಸಾಗುವಂತೆ ಸಿದ್ಧಗೊಳಿಸಲಾಗುತ್ತದೆ ಎಂದು ಸಮಕುಲಾಧಿಪತಿ ಡಾ.ಬಿ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಕುಲಸಚಿವ ಡಾ.ಬಿ.ಮಂಜುನಾಥ್, ಜೆಎಸ್‍ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ.ಮಧು ಕಾರ್ಯಕ್ರಮದಲ್ಲಿ ಹಾಜರಿದ್ದರು.