ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸರ್ಕಾರಕ್ಕೆ ಮನವಿ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಜೂ14 :- ಮಾರಣಾಂತಿಕ ಹಲ್ಲೆ ನಡೆಸಿ ಅಮಾಯಕ ವ್ಯಕ್ತಿಯ ಸಾವಿಗೆ ಕಾರಣಕರ್ತರಾಗಿರುವ ಚಿತ್ರ ನಟ ದರ್ಶನ್ ಮತ್ತು ಆತನ ಸಹಚರರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಗುರುವಾರ ತಾಲೂಕು ಕಚೇರಿಯ ಮುಂಬಾಗ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಕೆ.ಪಿ.ಚಂದ್ರಶೇಖರಯ್ಯ ಮಾತನಾಡಿ ಅಮಾಯಕ ಯುವಕನನ್ನು ನಟ ದರ್ಶನ್ ಮತ್ತು ಆತನ ಸಹಚರರು ಸೇರಿ ಕೊಲೆ ಮಾಡಿರುವುದು ಅತ್ಯಂತ ಹೇಯಕರ ಕೃತ್ಯವಾಗಿದೆ ಎಂದರು. ಯಾವುದೇ ವ್ಯಕ್ತಿ ತಪ್ಪು ಮಾಡಿದ್ದರೂ ಆತನಿಗೆ ಶಿಕ್ಷೆ ವಿಧಿಸಲು ಕಾನೂನು ಮತ್ತು ಪೆÇಲೀಸ್ ಇಲಾಖೆ ಇದೆ ಆದರೆ ಅಮಾಯಕ ವ್ಯಕ್ತಿಯನ್ನು ಅಪಹರಿಸಿ ಮರಣಾಂತಿಕವಾಗಿ ಹಲ್ಲೆ ನಡೆಸುವ ಮೂಲಕ ಆತನ ಸಾವಿಗೆ ಕಾರಣಕರ್ತರಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು. ನಟ ದರ್ಶನ್ ರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು ಮತ್ತು ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡದೆ ನೊಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ದಸಂಸ ಮುಖಂಡ ಪಿ.ಮಹದೇವ್ ಮಾತನಾಡಿ ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ನಟ ದರ್ಶನ್, ಆತನ ಪ್ರೇಯಸಿ ಪವಿತ್ರ ಗೌಡ ಮತ್ತು ಆತನ ಸಹಚರರಿಗೆ ಯಾವುದೇ ರೀತಿಯ ಕನಿಕರ ತೋರಿಸದೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು. ಈ ಪ್ರಕರಣದಿಂದ ಕನ್ನಡ ಚಿತ್ರರಂಗದ ಮಾನ ಹರಾಜಾಗಿದ್ದು, ಚಿತ್ರರಂಗವೇ ತಲೆತಗ್ಗಿಸುವಂತಾಗಿದೆ ಎಂದರು. ಗರ್ಭಿಣಿಯಾಗಿರುವ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರ ಸೂಕ್ತ ನೆರವು ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕಿದೆ ಎಂದರು.
ಮುಖಂಡರಾದ ನಾರಾಯಣ್, ಗಿರೀಶ್ ಮಾತನಾಡಿ ದುಷ್ಪೃತ್ಯವನ್ನು ಖಂಡಿಸಿದರು. ಬಳಿಕ ಪ್ರತಿಭಟನಾಕಾರರು ಉಪತಹಸಿಲ್ದಾರ್ ವಿನೋದ್ ಕುಮಾರ್ ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಜೆ.ಮೋಹನ್, ಮಂಜು, ಮುರುಳಿ, ಪುರಸಭೆ ಸದಸ್ಯ ನಿರಂಜನ್, ಸೇರಿದಂತೆ ಮತ್ತಿತರರು ಹಾಜರಿದ್ದರು.