ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ, ಕೌಶಲ್ಯ ವೃದ್ದಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.14- ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ ಹಾಗೂ ತಾಂತ್ರಿಕ ಕೌಶಲ್ಯ ಅಭಿವೃದ್ದಿಪಡಿಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ವಹಿಸಿದ ಕಾಳಜಿಯಿಂದ ಸ್ಪಿಂಗ್ ಬೋರ್ಡ್ ಕಾರ್ಯಕ್ರಮದಡಿ ಶಾಲೆಗಳಲ್ಲಿ ಇಂದಿನಿಂದ ಸ್ಮಾರ್ಟ್ ಟಿವಿ ಮೂಲಕ ತರಬೇತಿ ಆರಂಭವಾಗಿದೆ.
ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗಾಗಿ ಮೂಲ ಸೌಲಭ್ಯಗಳೊಂದಿಗೆ ಇನ್‍ಫೋಸಿಸ್, ಮೈಸೂರಿನ ರೋಟರಿ ಪಂಚಶೀಲ್, ಇನ್‍ಟ್ಯಾಕ್ ಸಂಸ್ಥೆಯ ನೆರವಿನೊಂದಿಗೆ ಸ್ಪ್ರಿಂಗ್‍ಬೋರ್ಡ್ ಎಂಬ ವಿನೂತನ ಕಾರ್ಯಕ್ರಮದಡಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತಾ ತರಬೇತಿ ನೀಡಲಾಗುತ್ತಿದೆ.
ಸಾಮಾಜಿಕ ಕಳಕಳಿಯೊಂದಿಗೆ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಶೈಕ್ಷಣಿಕ ಕಲಿಕಾ ಅವಕಾಶಗಳನ್ನು ಕಲ್ಪಿಸುವ ಸದುದ್ದೇಶದೊಂದಿಗೆ ಇನ್‍ಫೋಸಿಸ್ ಸ್ಪ್ರಿಂಗ್‍ಬೋರ್ಡ್ ಕಾರ್ಯಕ್ರಮದಡಿ ನಾನಾ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದೆ.
ಶಾಲಾ ಶಿಕ್ಷಣ ಇಲಾಖೆ ಸಿ.ಎಸ್.ಆರ್ ನೆರವಿನೊಂದಿಗೆ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ, ತಂತ್ರಜ್ಞಾನದ ಜತೆಯಲ್ಲಿಯೇ ವೃತ್ತಿಪರ ಕೌಶಲ್ಯ, ಡಿಜಿಟಲ್, ಜೀವನ, ನಡವಳಿಕೆ, ಇನ್ನಿತರ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಸ್ಪ್ರಿಂಗ್‍ಬೋರ್ಡ್ ಕಾರ್ಯಕ್ರಮ ಹೊಂದಿದೆ. ಕ್ಲಿಷ್ಟಕರವಾದ ಶಾಲಾ ಪಠ್ಯ ವಿಷಯಗಳನ್ನು ಪ್ರಯೋಗ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಸರಳ ಹಾಗೂ ಪರಿಣಾಮಕಾರಿಯಾಗಿ ಸ್ಪಿಂಗ್ ಬೋರ್ಡ್‍ನಿಂದ ಕಲಿಯಬಹುದಾಗಿದೆ. ಈ ವೈಶಿಷ್ಟ್ಯ ಪೂರ್ಣ ಡಿಜಿಟಲ್ ಶಿಕ್ಷಣ ಸಾಕಾರಗೊಳಿಸುವ ಪ್ರಕ್ರಿಯೆ ಗಡಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಆಸಕ್ತಿಯಿಂದ ಯಶಸ್ವಿಯತ್ತ ಸಾಗಿದೆ.
ಈಗಾಗಲೇ ಜಿಲ್ಲೆಯ ಒಟ್ಟು 60 ಸರ್ಕಾರಿ ಶಾಲೆಗಳನ್ನು ಕೌಶಲ್ಯ ಮತ್ತು ಕಂಪ್ಯೂಟರ್ ಸಾಕ್ಷರತಾ ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದು, ಇನ್‍ಫೋಸಿಸ್ 1500 ಟ್ಯಾಬ್ ಗಳು ಹಾಗೂ 120 ಸ್ಮಾರ್ಟ್ ಟಿವಿಗಳನ್ನು ನೀಡಿದೆ. ಚಾಮರಾಜನಗರ ತಾಲೂಕಿನ 20, ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲೂಕಿನ ತಲಾ 10 ಸರ್ಕಾರಿ ಶಾಲೆಗಳನ್ನು ಡಿಜಿಟಲ್ ಶಿಕ್ಷಣದ ಬಲವರ್ಧನೆ ಗುರಿಯೊಂದಿಗೆ ಸ್ಪಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.
ನಗರದ ಹೊರವಲಯದ ಮಲ್ಲಯ್ಯನಪುರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿಂದು ಸ್ಮಾರ್ಟ್ ಟಿವಿ ಮೂಲಕ ಸ್ಪಿಂಗ್ ಬೋರ್ಡ್‍ನಿಂದ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇನ್‍ಫೋಸಿಸ್, ರೋಟರಿ ಸಂಸ್ಥೆಯು ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಶಿಕ್ಷಣ ನೀಡುವ ಮಹತ್ತರ ಆಶಯದೊಂದಿಗೆ 7 ಕೋಟಿ ರೂ. ವೆಚ್ಚದಲ್ಲಿ ಟ್ಯಾಬ್ ಹಾಗೂ ಸ್ಮಾಟ್ ಟಿವಿಗಳನ್ನು ಶಾಲೆಗೆ ವಿತರಿಸಿದೆ. ಅಲ್ಲದೇ ವಿಷಯ ಪರಿಣತ ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರನ್ನು ನಿಯೋಜಿಸಿದೆ. ಗಡಿ ಜಿಲ್ಲೆಯನ್ನು ಸ್ಪಿಂಗ್ ಬೋರ್ಡ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದು, ಈ ವಿಶಿಷ್ಟ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಯಾವುದೇ ಜಿಲ್ಲೆಯ ಅಭಿವೃದ್ದಿಗೆ ಮೂಲಕ ಸೌಕರ್ಯಗಳು ಬೇಕು. ಇದರೊಂದಿಗೆ ಭದ್ರ ಬುನಾದಿ ಎಂದರೆ ಶಿಕ್ಷಣ. ಶೈಕ್ಷಣಿಕವಾಗಿ ಪ್ರಗತಿಯಾದರೆ ಜಿಲ್ಲೆಯು ಅಭಿವೃದ್ದಿ ಹೊಂದಲಿದೆ. ವಿದ್ಯಾರ್ಥಿಗಳಾಗಿರುವ ನಿಮ್ಮಲ್ಲಿ ಆತ್ಮವಿಶ್ವಾಸ ಇದೆ. ಕಲಿಯುವ ಹಂಬಲ ನಿಮ್ಮಲ್ಲಿ ಇರಬೇಕು. ದೊಡ್ಡಮಟ್ಟದ ಇಂತಹ ಕಾರ್ಯಕ್ರಮಗಳನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಇನ್‍ಫೋಸಿಸ್, ರೋಟರಿ ಸಹಯೋಗದೊಂದಿಗೆ ನಗರದ ಕಾರಾಗೃಹದ ಬಂಧಿಗಳಿಗೆ ಅಲ್ಲಿಯೇ ಕಂಪ್ಯೂಟರ್ ತರಬೇತಿ ಪಡೆಯಲು ಈ ಹಿಂದೆಯೇ 10 ಕಂಪ್ಯೂಟರ್, ಪ್ರಿಂಟರ್‍ಗಳನ್ನು ಒದಗಿಸಲಾಗಿದೆ. ಇನ್‍ಫೋಸಿಸ್ ಸಹಕಾರದೊಂದಿಗೆ ತರಬೇತಿ ಸಿಬ್ಬಂದಿಯನ್ನು ನಿಯೋಜಿಸಿ ಕಂಪ್ಯೂಟರ್ ಕೋರ್ಸ್‍ಗಳನ್ನು ಕಲಿಯುವ ಅವಕಾಶವನ್ನು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ತಿಳಿಸಿದರು.
ಇನ್‍ಫೋಸಿಸ್ ಸಂಸ್ಥೆಯ ಪ್ರೋಗ್ರಾಂ ವ್ಯವಸ್ಥಾಪಕ ಬಿಳಿಗಿರಿರಂಗ, ನಿರ್ದೇಶಕ ರವೀಂದ್ರ, ಸಂಸ್ಥೆಯ ಡಾ. ಎಸ್. ಮೀನಾಕ್ಷಿ, ದೀಪ್ತ ಪದ್ಮನಾಭ್, ರಾಜೇಶ್‍ರಾವ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥಪ್ರಸನ್ನ, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಲಿಂಗರಾಜು, ಇನ್ನಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.