ಸಂಸದರಾದ ಡಾ ಪ್ರಭಾರಿಂದ ಕೇಂದ್ರ ಸರ್ಕಾರದ ಯೋಜನೆಗಳ ಪ್ರಗತಿ ಪರಿಶೀಲನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೩; ನೂತನ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್   ವಿವಿಧ ಸಭೆಗಳಲ್ಲಿ ಭಾಗವಹಿಸಿದರು. ಜಿಲ್ಲಾ ಪಂಚಾಯತ್ ಮುಖ್ಯನಿರ್ವಹಣಾಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಮತ್ತು ಪ್ರಗತಿಯ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಭೆ ನಂತರ ಗೃಹ ಕಛೇರಿ ಶಿವಪಾರ್ವತಿಗೆ ಆಗಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ಮತದಾರ ಭಾಂದವರ ಶುಭಾಶಯಗಳನ್ನು ಸ್ವೀಕರಿಸಿದರು.ಸಂಜೆ ತಹಶೀಲ್ದಾರ್ ಡಾ. ಎಂ.ಬಿ.ಅಶ್ವಥ್ ಅವರೊಂದಿಗೆ ಸಭೆ ನಡೆಸಿದ ಸಂಸದರು ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಗೆ ಹಾನಿಗೊಳಗಾದ ಬಟ್ಲಕಟ್ಟೆ ಗ್ರಾಮದ ಮನೆಗೆ ಪರಿಹಾರ ವಿತರಣೆಗೆ ಸೂಚಿಸಿ ಲಿಂಗತ್ವ ಅಲ್ಪಸಂಖ್ಯಾತರಿಗೆ, ವಿಧವೆ ಮತ್ತು ವೃದ್ದರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿದರು.ಹಳೇ ಕುಂದುವಾಡ ಮತ್ತಿತರ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಗೆ ಅಗತ್ಯ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ತಿಳಿಸಿದರು.