ಚಿಕ್ಕೋಡಿ ಕ್ಷೇತ್ರದ ಜನತೆ ವಹಿಸಿರುವ ಜವಾಬ್ದಾರಿ ನಿರೀಕ್ಷೆಗೂ ಮೀರಿ ನಿರ್ವಹಿಸುವೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೩: ಚಿಕ್ಕೋಡಿ ಕ್ಷೇತ್ರದ ಜನರು ಚಿಕ್ಕ ವಯಸ್ಸಿನ ನನಗೆ ವಹಿಸಿರುವ ಜವಾಬ್ದಾರಿಯನ್ನು ನಿರೀಕ್ಷೆಗೂ ಮೀರಿ ನಿರ್ವಹಿಸುವೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯೆ ಪ್ರಿಯಾಂಕಿ ಜಾರಕಿಹೊಳಿ ತಿಳಿಸಿದರು. ಜಿಲ್ಲಾ ನಾಯಕರ ಹಾಸ್ಟೆಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕ್ಕೋಡಿ ಕ್ಷೇತ್ರದಲ್ಲಿ ನನಗೆ ಟಿಕೆಟ್ ನೀಡುವುದಕ್ಕೆ ಯಾರ, ಯಾವುದೇ ವಿರೋಧ ಇರಲಿಲ್ಲ. ‌ಎಲ್ಲರೂ ಸಭೆ ನಡೆಸಿ ತೀರ್ಮಾನಿ ಸಿಯೇ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದರು.ಅಥಣಿ ಕ್ಷೇತ್ರದಲ್ಲಿ ಕಡಿಮೆ ಲೀಡ್ ಬರುವುದಕ್ಕೆ ಲಕ್ಷ್ಮಣ ಸವದಿ ಕೆಲಸ ಮಾಡಿಲ್ಲ ಎಂಬುದಾಗಿ ನಮ್ಮ ತಂದೆಯವರು ಹೇಳಿದ್ದಾರೆ. ಹಾಗಾಗಿ ಆ ವಿಷಯ ನಮ್ಮ ತಂದೆಯವರಿಗೂ ಲಕ್ಷ್ಮಣ ಸವದಿ ಅವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಉತ್ತರ ಕರ್ನಾಟಕದ ಕೈಗಾರಿಕೆ ಒಳಗೊಂಡಂತೆ ಸಾಕಷ್ಟು ಸಮಸ್ಯೆ ಇವೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತದೆ. ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪ ಮಾಡಲಾಗುವುದು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನ ಹರಿಸುತ್ತಾರೆ. ಸಮಸ್ಯೆ ಇವೆ ಅಂದ ಮಾತ್ರಕ್ಕೆ ಪ್ರತ್ಯೇಕ ರಾಜ್ಯದ ಪ್ರಸ್ತಾಪ ಇಲ್ಲ ಎಂದು ತಿಳಿಸಿದರು.ದಾವಣಗೆರೆಯಲ್ಲಿ ನಾಯಕ ಸಮಾಜದವರು ಸನ್ಮಾನ ಮಾಡಿರುವುದು ತುಂಬಾ ಸಂತೋಷ ದ ವಿಚಾರ. ತಂದೆಯವರ ಮಾರ್ಗದರ್ಶನದಲ್ಲಿ ಎಲ್ಲಾ ಜಿಲ್ಲೆಗಳಿಗೆ ತೆರಳಿ ಸಮಾಜ ಬಾಂಧವರ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.ಈ ವೇಳೆ ರಾಹುಲ್ ಜಾರಕಿಹೊಳಿ, ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಸವಿತಾ ಗಣೇಶ್ ಹುಲ್ಮನೆ, ಮೀನಾಕ್ಷಿ ಜಗದೀಶ್,   ಬಿ. ವೀರಣ್ಣ, ಎಂ.ಬಿ.‌ ಹಾಲಪ್ಪ, ಶ್ರೀನಿವಾಸ್ ದಾಸಕರಿಯಪ್ಪ, ಹೊದಿಗೆರೆ ರಮೇಶ್ ಇತರರು ಇದ್ದರು.