ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲಿ : ಪಾಟೀಲ್
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ25: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದ ಉಚ್ಚನ್ಯಾಯಾಲದ ತೀರ್ಪನ್ನು ಬಿಜೆಪಿ ಸ್ವಾಗತಿಸಿದ್ದು, ನೈತಿಕ ಹೊಣೆಹೊತ್ತು ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೇ, ಹಗರಣಗಳ ಸರಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ ಬ್ರಹ್ಮಾಂಡ ಭ್ರಷ್ಟಚಾರ ಬಯಲಿಗೆ ಬಂದಿತು.
ಇದಾದ ಬಳಿಕ ಮುಖ್ಯಮಂತ್ರಿ ಕುಟುಂಬದಿಂದ ಮೈಸೂರಿನ ಮುಡಾದಲ್ಲಿ ಸೈಟ್‍ಗಳನ್ನು ಪಡೆಯುವ ಮೂಲಕ ಹಗರಣಗಳನ್ನು ಮಾಡಿರುವುದು ಸೇರಿದಂತೆ ಬೇರೆ, ಬೇರೆ ಇಲಾಖೆಗಳ ಸಚಿವರ ಇಲಾಖೆಗಳ ಹಗರಣಗಳ ಮೂಲಕ ರಾಜ್ಯ ಸರ್ಕಾರ ಭ್ರಷ್ಟಚಾರದಲ್ಲಿ ಮುಳಗಿದೆ. ಕೇವಲ ಸರ್ಕಾರಕ್ಕೆ ಬಂದು ನಾಲ್ಕಾರು ತಿಂಗಳಲ್ಲಿ ಹಗರಣಗಳನ್ನು ಮಾಡುತ್ತಾ ಬಂದಿದೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಆದರೆ, ಸಿದ್ದರಾಮಯ್ಯನವರು ಈ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ ಎಂದು ಮೊಂಡುತನ ಪ್ರದರ್ಶನ ಮಾಡಿದರು. ಕೆಲ ಸಾಮಾಜಿಕ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದರು. ಕೊನೆಗೆ ಪರಿಶೀಲಿಸಿ, ಮುಡಾ ಪ್ರಕರಣವನ್ನು ರಾಜ್ಯಪಾಲರು ಪ್ರಾಸಿಕ್ಯೂಸನ್‍ಗೆ ಅನುಮತಿ ನೀಡಿದರು. ಮುಖ್ಯಮಂತ್ರಿಯಾದಿಯಾಗಿ ಸಚಿವರು, ಶಾಸಕರು ರಾಜ್ಯಪಾಲರ ವಿರುದ್ಧ ನಡೆಯನ್ನು ಪ್ರಶ್ನಿಸಿದರು.
ರಾಜ್ಯಭವನ ಬಿಜೆಪಿ ಕಾರ್ಯಕರ್ತರ ಕಾರ್ಯಾಲಯ ಎಂದು ದೂರಿದರು. ಇಷ್ಟೆಲ್ಲವಾದ ಬಳಿಕವೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಂಡುತನ ಮುಂದುವರೆಸಿ, ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇದೀಗ ಉಚ್ಚ ನ್ಯಾಯಾಲಯದ ತೀರ್ಪು ಪ್ರಕಟವಾಗಿದೆ. ರಾಜ್ಯಪಾಲರು ಆದೇಶವನ್ನು ಹೈಕೋರ್ಟು ಎತ್ತಿ ಹಿಡಿದಿದೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಾನು ಇನ್ನೂ ನ್ಯಾಯಾಲಯದ ತೀರ್ಪು ಓದಿಲ್ಲ ಎಂದೇಳುವ ಮೂಲಕ ಮತ್ತೆ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನ್ಯಾಯಾಲಯದ ತೀರ್ಪುಗೆ ತಲೆಬಾಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಅಶೋಕ್ ಜೀರೆ, ಅಯ್ಯಾಳಿ ತಿಮ್ಮಪ್ಪ, ಬಲ್ಲಹುಣ್ಸಿ ರಾಮಣ್ಣ, ಕೃಷ್ಣ ನಾಯ್ಕ್ ಕೆ.ರಾಘವೇಂದ್ರ, ಕಿಚಿಡಿ ಕೊಟ್ರೇಶ್ ಸುದ್ಧಿಗೊಷ್ಠಿಯಲ್ಲಿದ್ದರು.
ರಾಜ್ಯ ಸರ್ಕಾರ ಈಗಾಗಲೇ ಮೈಸೂರು ದಸರಾ ಉತ್ಸವಕ್ಕೆ ಸಿದ್ದತೆ ಮಾಡಿಕೊಂಡಿದೆ. ಆದರೆ, ಕಳೆದ ವರ್ಷ ಹಂಪಿ ಉತ್ಸವದಲ್ಲಿ ಕಲಾವಿದರು, ಗೌರವಧನ, ಪ್ರೋತ್ಸಹ ಧನ ಸೇರಿದಂತೆ ಲಾಡ್ಜ್-ಹೋಟೆಲ್‍ಗಳ ಊಟ-ವಸತಿ ಬಿಲ್ ಪಾವತಿ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಜಿಲ್ಲಾಡಳಿತ ಈ ಕುರಿತು ಕ್ರಮ ವಹಿಸಬೇಕಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಮೀರ್ ಅಹಮದ್ ಅವರನ್ನು ಜಿಲ್ಲಾ ಉಸ್ತುವಾರಿ ನೀಡಿ, ಹೊಸ ಜಿಲ್ಲೆ ಅಭಿವೃದ್ಧಿಯ ಹೊಣೆಯನ್ನು ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿಜಯನಗರ ಜಿಲ್ಲೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಹೊಂದಾಣಿಕೆ ಕೊರತೆ ಇದೆ. ಅದರಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯರು ಆಗಿರದ ಕಾರಣದಿಂದ ವಿಜಯನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ಆರೋಪಿಸಿದರು.