ಪೋಷಣ ಅಭಿಯಾನ ಉದ್ಘಾಟನೆಕೇಂದ್ರದ ಯೋಜನೆಗಳ ಸದುಪಯೋಗಕ್ಕೆ ಕರೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಸೆ.25 : ಕೇಂದ್ರ ಸರ್ಕಾರವು ಬಡವರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಲ್.ಕೃಷ್ಣನಾಯ್ಕ ಕರೆ ನೀಡಿದರು.
ಇಲ್ಲಿನ ಪಂಚಮಸಾಲಿ ಭವನದಲ್ಲಿ ಕೇಂದ್ರ ಸಂವಹನ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷಣ  ಅಭಿಯಾನ ಹಾಗೂ ಕೇಂದ್ರ ಸರ್ಕಾರಿ ಯೋಜನೆಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
ಕೇಂದ್ರ ಸರ್ಕಾರವು ಬಡವರು, ಮಧ್ಯಮ ವರ್ಗದವರು, ರೈತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗೆ ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ ಯೋಜನೆಯಡಿ 5 ಲಕ್ಷ ರೂ. ಆರೋಗ್ಯ ವಿಮೆ ದೊರೆಯಲಿದೆ. ನಿರಾಶ್ರಿತ ಬಡವರು ಪಿಎಂ ಆವಾಸ್ ಯೋಜನೆಯಡಿ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ಸರ್ಕಾರ ನೇರವಾಗಿ ಫಲಾನುಭವಿ ಆಯ್ಕೆ ಮಾಡುತ್ತದೆ. ಬ್ರಿಟಿಷ್ ಕಾಲದ ಕಾನೂನುಗಳಿಗೆ ಸರ್ಕಾರ ತಿದ್ದುಪಡಿ ತಂದು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೊಳಿಸಿದೆ. ಮನೆಯಿಂದಲೇ ದೂರು ಸಲ್ಲಿಸುವ ವ್ಯವಸ್ಥೆ ಇಂತಹ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಸಂವಹನ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕ ಎಸ್.ಜಿ.ರವೀಂದ್ರ ಮಾತನಾಡಿ, ಮಹಿಳೆಯರ, ಮಕ್ಕಳ ಅಪೌಷ್ಟಿಕತೆ ದೂರ ಮಾಡಲು ಪೋಷಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಮಹತ್ವಕಾಂಕ್ಷಿ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಯೋಜನೆಗಳು ಸಾರ್ಥಕವಾಗುತ್ತವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಶ್ವೇತಾ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಂಕರನಾಯ್ಕ, ಡಾ. ಬಿ. ಶಿವಕುಮಾರ್, ಮುಖಂಡರಾದ ಎಂ.ಪರಮೇಶ್ವರಪ್ಪ, ವಾರದ ಗೌಸ್ ಮೊಹಿದ್ದೀನ್, ಎಚ್.ಪೂಜಪ್ಪ, ಹಣ್ಣಿ ಶಶಿಧರ,  ಎನ್.ಕೋಟೆಪ್ಪ, ಬೀರಬ್ಬಿ ಬಸವರಾಜ, ಬಿ.ತೋಟನಾಯ್ಕ, ಕೆ.ಸುರೇಶ, ವಿಶ್ವನಾಥ ಮಂತ್ರೋಡಿ, ಕಣದಾಳ ಶಂಕ್ರಪ್ಪ, ಪುರಸಭೆ ಸದಸ್ಯೆ ಶಾಂತಮ್ಮ ಉಪಸ್ಥಿತರಿದ್ದರು