ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟ ಸಪ್ತಾಹ
ಜೇವರ್ಗಿ,ಜೂ.13-ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟ ಸಪ್ತಾಹ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಿಂತಕ ಪೆÇ್ರ.ಆರ್.ಕೆ.ಹುಡಗಿ ಮಾತನಾಡುತ್ತ, ನಾವು ಬದುಕಿನಲ್ಲಿ ಏನಾದರೂ ಉನ್ನತವಾದುದ್ದನ್ನು ಸಾಧಿಸಬೇಕಾದರೆ ಶಿಕ್ಷಣ ಬಹಳ ಅಗತ್ಯ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಜ್ಞಾನದ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದು ಹೇಳಿದರು.
ಇಂದು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದರೂ ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೇಳುತ್ತ, ಅಂದಿನ ಕಾಲದಲ್ಲಿ ತಾವು ಹೇಗೆ ಉತ್ತೀರ್ಣರಾದೆವು ಎಂಬ ಬಗ್ಗೆ ತಮ್ಮದೇ ಆದ ಉದಾಹರಣೆಯ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸುವಂತೆ ಸಲಹೆಗಳನ್ನು ನೀಡಿದರು.
ಸಪ್ತಾಹ ಕೂಟದ ಅಂಗವಾಗಿ ಆಯೋಜನೆ ಮಾಡಲಾಗಿರುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಸೃಜನಾತ್ಮಕ ಸಾಮಥ್ರ್ಯ ಹೊರಹಾಕಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಕರಿಗೊಳೇಶ್ವರ ಮಾತನಾಡಿ, ಈ ದೇಶಕ್ಕೆ ಬುದ್ಧ, ಬಸವ, ಅಂಬೇಡ್ಕರ್ ನೀಡಿದ ಕೊಡುಗೆಯನ್ನು ನಾವು ಯಾವತ್ತೂ ಮರೆಯಬಾರದು, ಅವರ ಸಿದ್ಧಾಂತ ಮತ್ತು ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಆ ಮೂಲಕ ಪ್ರತಿಯೊಂದು ಮನೆಯಲ್ಲೂ ಒಬ್ಬ ಬುದ್ಧ, ಬಸವ ಹಾಗೂ ಬಾಬಾ ಸಾಹೇಬರು ಹುಟ್ಟುವಂತಾಗಬೇಕು ಹಾಗೂ ನಾವೆಲ್ಲರೂ ಅವರ ಸಿದ್ಧಾಂತಗಳನ್ನು ಎಲ್ಲೆಡೆ ಪಸರಿಸುತ್ತ ಆ ಮೂಲಕ ದೇಶಕ್ಕೆ ಅನನ್ಯ ಕೊಡುಗೆ ನೀಡಲು ಪ್ರತಿಯೊಬ್ಬರೂ ಸನ್ನದ್ಧರಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸ್ಮರಣಾರ್ಥ ಸ್ಪರ್ಧಾಕೂಟದ ಸಂಚಾಲಕ ಭೀಮಣ್ಣ, ಐಕ್ಯೂಎಸಿ ಸಂಚಾಲಕಿ ಡಾ.ಖುತಿಜಾ ನಶ್ರೀನ್, ಸಿಬ್ಬಂದಿ ಕಾರ್ಯದರ್ಶಿ ಡಾ.ಲಕ್ಷ್ಮಣ ಭೋಸ್ಲೆ, ಡಾ.ಶರಣಪ್ಪ ಸೈದಾಪುರ, ಡಾ.ಗಿರೀಶ್ ರಾಥೋಡ್, ಡಾ.ಶರಣಪ್ಪ ಗುಂಡಗುರ್ತಿ, ಡಾ.ಶ್ರೀಧರ್, ಡಾ.ವಿನೋದ್ ಕುಮಾರ್, ರಾಮುಲು, ಡಾ.ಗೀತಾರಾಣಿ, ಡಾ.ಫರಿಶಾ ಜಬಿನ್ ಹಾಗೂ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.
ಅಮಿತ್ ರಮೇಶ್ ಮಾಶಿಮಡೆ ನಿರೂಪಿಸಿದರು. ಖಾಜಾವಲಿ ಈಚಿನಾಳ ವಂದಿಸಿದರು.