ಸಂಡೂರು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆಕುದುರೆಮುಖ ಕಂಪನಿಗೆ ಅನುಮತಿ ನೀಡಿದ ಕುಮಾರಸ್ವಾಮಿ
(ಸಂಜೆವಾಣಿ ವಾರ್ತೆ)
ನವದೆಹಲಿ:ಜೂ,13-  ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡು ಕರ್ನಾಟಕಕ್ಕೆ ಸಂಬಂಧಿಸಿ ನಿನ್ನೆ ಮೊದಲ ಕಡತಕ್ಕೆ ಸಹಿ ಹಾಕಿದ್ದು ಬೇರೆ ಯಾವುದಕ್ಕೂ ಅಲ್ಲ. ಸಂಡೂರು ಬೆಟ್ಟ ಪ್ರದೇಶದಲ್ಲಿ ಕುದುರೆಮುಖ ಉಕ್ಕು ಕೈಗಾರಿಕಾ ಕಾರ್ಖಾನೆಗೆ ಅದಿರು ಒದಗಿಸಲು ಗಣಿಗಾರಿಕೆ  ನಡೆಸಲು.
ಬಳ್ಳಾರಿ ಜಿಲ್ಲೆಯ ಸಂಡೂರಿನ ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿನ ಉದ್ದೇಶಿತ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ಯೋಜನೆಯ ಕಡಿತಕ್ಕೆ ಅವರು ಸಹಿ ಹಾಕಿದ್ದಾರೆ. ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್ (ಕೆಐಓಸಿಎಲ್) ಗೆ ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಅನುಮತಿ ನೀಡಿತ್ತು.
388 ಹೆಕ್ಟೇರ್‌ ಅರಣ್ಯವಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸುವ ಯೋಜನೆ  ಇದಾಗಿದೆ.
ಈ ಗಣಿಗಾರಿಕೆ 50 ವರ್ಷಗಳ ಅವಧಿಯ ಗುತ್ತಿಗೆಗೆ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ಇಲಾಖೆ 2023ರ ಜನವರಿ 2 ರಂದು ಒಪ್ಪಿಗೆ ನೀಡಿದೆ. ಗುತ್ತಿಗೆ ಅವಧಿಯಲ್ಲಿ ಈ ಪ್ರದೇಶದಲ್ಲಿ ಕನಿಷ್ಠ 30 ಮಿಲಿಯನ್ ಟನ್ ಅದಿರು ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ.
ಈ ಕಡತ ಕೇಂದ್ರ ಉಕ್ಕು ಇಲಾಖೆಯಲ್ಲಿ ಹಲವು ದಿನಗಳಿಂದ ಬಾಕಿ ಬಿದ್ದಿತ್ತು. ಉದ್ಯೋಗ ಭವನದ ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ ಸಿನ್ಹಾ ಹಾಗೂ ಇತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿಕ ಸಚಿವರು ಬುಧವಾರ ಈ ಕಡಿತಕ್ಕೆ ಸಹಿ ಹಾಕಿದ್ದಾರೆ.  ಈ ಕಡತಕ್ಕೆ ಕೇಂದ್ರ ಹಣಕಾಸು ಇಲಾಖೆಯ ಅನುಮೋದನೆ ಇನ್ನೂ ದೊರೆಯಬೇಕಿದೆ.