ನಿಸರ್ಗ ದೇವರ ಪೂಜೆ, ಪೋಷಣೆ ಮಾಡಿ
ಬೀದರ್:ಜೂ.13: ನಿಸರ್ಗವೇ ಕಣ್ಣಿಗೆ ಕಾಣುವ ದೇವರು. ನಾವು ನಿಸರ್ಗವನ್ನು ನಿತ್ಯ ಪೂಜಿಸಬೇಕು ಹಾಗೂ ಪೆÇೀಷಿಸಬೇಕು. ಆಗ ನಿಸರ್ಗ ನಮ್ಮನ್ನು ಕಾಪಾಡಿ ಸುರಕ್ಷಿತವಾಗಿ ಇಡುತ್ತದೆ ಎಂದು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ( ನಿರುಗುಡಿ ಮುತ್ತ್ಯಾ) ಹೇಳಿದರು.
ನಗರದ ಶಹಾಪುರ ಗೇಟ್ ಹತ್ತಿರದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ಬುಧವಾರ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದ ಅವರು, ಪರಿಸರವನ್ನು ಇದು ನಮ್ಮ ಮಕ್ಕಳಿಗಿಂತಲೂ ಹೆಚ್ಚು ಜೋಪಾನವಾಗಿ ಸಂರಕ್ಷಣೆ ಮಾಡಿ ಬೆಳೆಸಬೇಕಿದೆ. ಇದು ಪ್ರತಿಯೊಂದು ಕುಟುಂಬದ ಕರ್ತವ್ಯವಾಗಿದೆ. ಪರಿಸರ ಉಳಿಸುವ ಕೆಲಸ ನಾವು ಮಾಡದಿದ್ದರೆ ಅದು ನಮ್ಮನ್ನು ಹೇಗೆ ಕಾಪಾಡಲು ಸಾಧ್ಯ ಎಂಬುದು ಎಲ್ಲರೂ ಅರಿಯಬೇಕು ಎಂದು ನುಡಿದರು.
ವಾಯ್ಸ್ ಆಫ್ ಬೀದರ್ ಸೋಷಿಯಲ್ ಮೀಡಿಯಾ ನೆಟ್‍ವರ್ಕ್‍ನ ಮುಖ್ಯಸ್ಥರಾದ ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಜಾಗತಿಕ ತಾಪಮಾನ (ಗ್ಲೋಬಲ್ ವಾರ್ಮಿಂಗ್)ಹೆಚ್ಚಾಗಿರುವುದು ಸಮಾಜಕ್ಕೆ ಆಪತ್ತು ತಂದಿದೆ. ಭಾರತದಲ್ಲಿ ಬಿಸಿಲಿನ ತಾಪ ಈ ಬಾರಿ 50 ಡಿಗ್ರಿ ಸೆಲ್ಸಿಯಸ್‍ಗೆ ಬಂದಿದೆ. ರಾಜಸ್ಥಾನ ಸೇರಿದಂತೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಕಳೆದ ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ನೂರಾರು ಮಕ್ಕಳು ಜೀವ ಬಿಟ್ಟಿದ್ದಾರೆ. ತೊಟ್ಟಿಲಲ್ಲಿ ಆಡುತ್ತಿರುವ ಕಂದಮ್ಮಗಳ ಪ್ರಾಣಪಕ್ಷಿ ಹಾರಿವೆ. ಇದಕ್ಕೆ ಯಾರು ಹೊಣೆ? ಉತ್ತರದ ಮಲೆನಾಡು ಎಂದು ಕರೆಯಿಸಿಕೊಳ್ಳುವ ಬೀದರ್ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಉಷ್ಣಾಂಶ 46 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ಮುಂಬರುವ ದಿನಗಳಲ್ಲಿ ಎದುರಾಗಲಿರುವ ಭಾರಿ ಅಪಾಯದ ಸ್ಪಷ್ಟ ಮುನ್ಸೂಚನೆ ಎಂದರು.
ಬೀದರ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಾಕಷ್ಟು ಕಡೆಗಳಲ್ಲಿನ ಅರಣ್ಯ ಜಾಗ ಕಬಳಿಕೆ ತೆರವು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಅವರು ಕೈಗೊಂಡಿರುವ ದಿಟ್ಟ ನಿರ್ಧಾರದಿಂದ ಭೂ ಮಾಫಿಯಾಗಳಿಗೆ ಬಿಸಿ ತಟ್ಟಿದೆ. ಅರಣ್ಯ ಉಳಿಸಿ, ಬೆಳೆಸುವ ಕೆಲಸ ಪರಿಣಾಮಕಾರಿ ನಡೆಯಬೇಕು. ಸಸಿ ನೆಡುವುದು ಮುಖ್ಯವಲ್ಲ, ಅವುಗಳ ಪೋಷಣೆ ಅತೀ ಮುಖ್ಯವಾಗಿದೆ. ಪರಿಸರ ಸಂರಕ್ಷಣೆಗೆ ಈಗಿನಿಂದಲೇ ಮುಂದಾಗದಿದ್ದರೆ ಬೀದರ್ ಜಿಲ್ಲೆಯು ಸಹ ಮುಂದಿನ ದಿನಗಳಲ್ಲಿ ಬಿಸಿಲ ನಾಡು ಆಗಿ ಅನೇಕ ಸಮಸ್ಯೆಗಳಿಗೆ ಸಿಲುಕಲಿದೆ ಎಂದು ಎಚ್ಚರಿಸಿದರು.
ನಿಸರ್ಗ ಹಾಗೂ ನಿಸರ್ಗ ನ್ಯಾಯ ಎಲ್ಲಕ್ಕಿಂತ ದೊಡ್ಡದು. ಇಲ್ಲಿ ಅನ್ಯಾಯ ಮಾಡಿದವರಿಗೆ ಶಿಕ್ಷೆ ಖಚಿತ. ನಾವು ಹಾಗೂ ನಮ್ಮ ಮುಂದಿನ ಪೀಳಿಗೆ ಚೆನ್ನಾಗಿ ಇರಬೇಕಾದರೆ ಪರಿಸರ ಪ್ರೀತಿ, ಕಾಳಜಿಗೆ ಮೊದಲ ಆದ್ಯತೆಯನ್ನು ಕೊಡಲೇಬೇಕು. ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಗಿಡ, ಮರಗಳು ಕ್ಷೀಣಿಸುತ್ತಿವೆ. ಇದು ಸಮಾಜಕ್ಕೆ ಬರುವ ದಿನಗಳಲ್ಲಿ ದೊಡ್ಡ ಗಂಡಾಂತರ ತರಬಲ್ಲದು. ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದಲ್ಲ.
-ಶ್ರೀ ಸದ್ಗುರು ಹವಾ ಮಲ್ಲಿನಾಥ ಮಹಾರಾಜ
ನಿರಗುಡಿ ಮುತ್ತ್ಯಾ ಅವರ ದೇಶಸೇವೆ, ಸಮಾಜ ಪರ ಚಿಂತನೆ ಮಾದರಿಯಾಗಿದೆÀ. ದೇಶಾದ್ಯಂತ ಸಂಚರಿಸಿ ಜನರಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ 3 ಸಾವಿರಕ್ಕೂ ಹೆಚ್ಚು ಮಠ, ಲಕ್ಷಾಂತರ ಭಕ್ತರಿಗೆ ಹೊಂದಿದ್ದರೂ ಯಾವುದೇ ಮಠ, ಪೀಠಕ್ಕೆ ಅಂಟಿಕೊಳ್ಳದೆ ದೇಶ ಸೇವೆಯಲ್ಲಿ ತೊಡಗಿದ್ದಾರೆ. ನಿಸರ್ಗವೇ ದೇವರು, ನಿಸರ್ಗವೇ ನಸೀಬು ಎಂಬ ಘೋಷಣೆ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ಯಾವುದೇ ಜಾತಿ, ಮತ, ಪಂಥ ಎನ್ನದೇ ದೇಶ ಮೊದಲು, ರಾಷ್ಟ್ರ ಧರ್ಮವೇ ಸರ್ವಶ್ರೇಷ್ಠ ಎಂದು ಕೆಲಸ ಮಾಡುತ್ತಿರುವ ಅಪರೂಪದ ರಾಷ್ಟ್ರ ಸಂತರಾಗಿದ್ದಾರೆ.
-ಸದಾನಂದ ಜೋಶಿ
ಹಿರಿಯ ಪತ್ರಕರ್ತ