ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ದೊರೆಯಲಿ
ಬೀದರ:ಜೂ.13:ಕೃಷಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳು ರೈತರಿಗೆ ಸಕಾಲದಲ್ಲಿ ದೊರೆಯುವಂತಾಗಬೇಕು. ರೈತರು ಬೀಜ ಗೊಬ್ಬರಕ್ಕಾಗಿ ತೊಂದರೆ ಅನುಭವಿಸಬಾರದು ಹಾಗೂ ಕೃಷಿ ಪರಿಕರುಗಳು ರೈತರ ಅಗತ್ಯಕ್ಕನುಗುಣವಾಗಿ ತಲುಪಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ರೈತ ಸಂಪರ್ಕ ಕೇಂದ್ರದಲ್ಲಿ ಜರುಗಿದ 2024ನೇ ಸಾಲಿನ ಮುಂಗಾರು ಹಂಗಾಮಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಶಾಂತಿಯುತವಾಗಿ ಬಿತ್ತನೆ ಬೀಜ ಪಡೆಯಬೇಕು. ಸೋಯಾಬಿನ್ , ತೋಗರೆ, ಹೆಸರು ಬೀಜಗಳನ್ನು ದಾಸ್ತಾನು ಮಾಡಲಾಗಿದ್ದು, ಎಫ್‍ಐಡಿ ಅಥವಾ ಆಧಾರ ಕಾರ್ಡ್ ಝರಾಕ್ಸ್ ಪ್ರತಿ ತಂದು ಬೀಜವನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು ಎಂದರು.
ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಮುಂಗಾರು ಹಂಗಾಮಿನಲ್ಲಿ ರೈತರು ಕೃಷಿ ಬೆಳೆಗಳ ಜತೆಗೆ ತರಕಾರಿ ಬೆಳೆಗಳನ್ನು ಮತ್ತು ಸಿರಿ ಧಾನ್ಯ ಬೆಳೆಯಬೇಕು. ರೈತರು ಮಧ್ಯದಲ್ಲಿ ದ್ವಿದಳ ಬೆಳೆಗಳ ಬಿತ್ತನೆ ಬೀಜಗಳನ್ನು ಸರತಿಸಾಲಿನಲ್ಲಿ ಹಾಕಿ ಬೆಳೆಗಳನ್ನು ಬೆಳೆಯಬಹುದು. ತೊಗರಿ ಹಾಗೂ ಹೆಸರುಬೇಳೆ ಬಿತ್ತನೆ ಬೀಜಗಳನ್ನು ಪ್ರಾಯೋಗಿಕವಾಗಿ ವಿತರಿಸಲಾಗುತ್ತಿದ್ದು ಬೆಳೆಗಳು ಗುಣಮಟ್ಟದಿಂದ ಬಂದರೆ ಮುಂದಿನ ಸಂತೋಷದ ಜೀವನ ನಡೆಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಅನ್ಸಾರಿ ಎಂಎಕೆ, ಮುಖಂಡರಾದ ಕುಶಲರಾವ ಯಾಬಾ, ಸುರೇಶ ಮಾಶೆಟ್ಟಿ, ರವಿಕುಮಾರ್ ವಾಡಿಕರ್, ಅನೀಲ ಗುನ್ನಳ್ಳಿ, ಉದಯ ಮಹಾರಾಜ, ಬಸವರಾಜ ಕ್ಯಾಸಾ, ಜೋಸೆಫ್ ಕೊಡ್ಡೆಕರ್, ಉಮೇಶ ಯಾಬಾ, ಸಂತೋಷ ರೆಡ್ಡಿ, ತಜಮುಲ್ಲ ಹುಸೇನ್, ಸಂಗಮೇಶ ಉದಗೀರೆ, ಸೂರ್ಯಕಾಂತ, ಓಂಕಾರ ಮಜಗೆ, ರೈತರು ಮತ್ತಿತರರು ಉಪಸ್ಥಿತರಿದ್ದರು.