ಅಟ್ಟೂರ ಕೆರೆ ಒಡೆದು 200 ಎಕರೆ ಜಮಿನು ಹಾನಿ
ಬೀದರ್:ಜೂ.13: ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದ್ದು, ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್ ಹೋಬಳಿಯಲ್ಲಿ ಅಟ್ಟೂರ್ ಕೆರೆ ಒಡೆದು ಅಪಾರ ಪ್ರಮಾಣದ ನೀರು ಹರಿದುಹೋಗಿದೆ.
ಕೆರೆ ಒಡೆದು ಅಪಾರ ಪ್ರಮಾಣದ ನೀರಿನೊಂದಿಗೆ 200 ಎಕರೆ ಪ್ರದೇಶದ ಹೊಲಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಅಟ್ಟೂರ್ ತಾಂಡಾ ಸೇರಿದಂತೆ ತಾಲ್ಲೂಕಿನ ಹತ್ತು ಸೇತುವೆಗಳು ಕುಸಿದಿರುವುದರಿಂದ ಸಂಚಾರ ಕಡಿತಗೊಂಡಿದೆ.
ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್ ಹೋಬಳಿಯಲ್ಲಿ 18 ಸೆಂ.ಮೀ. ಮಳೆಯಾಗಿದೆ. ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಹರಿಸಲಾಗಿದ್ದು, ಕೊಂಗಳಿ ಬ್ರಿಜ್ ಕಂ ಬ್ಯಾರೇಜ್‍ನಿಂದ ತಡವಾಗಿ ಗೇಟ್‍ಗಳನ್ನು ತೆರೆದ ಕಾರಣ ನೂರಾರು ಎಕರೆ ಪ್ರದೇಶದ ಹೊಲಗಳಿಗೆ ನೀರು ನುಗ್ಗಿದೆ. ಬ್ರಿಜ್ ಕಂ ಬ್ಯಾರೇಜಿನ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಗೇಟ್ ತೆರೆಯಲು ಸಾಧ್ಯವಾಗಿರಲಿಲ್ಲ. ಅಧಿಕಾರಿಗಳ ಮನವೊಲಿಸಿ ಗೇಟ್ ತೆರೆದು ನೀರು ಹರಿಸುವಷ್ಟರಲ್ಲಿ ಗದ್ದೆಗಳಿಗೆ ನೀರು ನುಗ್ಗಿದೆ.