ಜನ ನಿಬಿಡ ಪ್ರದೇಶದಲ್ಲಿ ಬಾರ್: ಮಹಿಳೆಯರ ಭಾರಿ ಪ್ರತಿಭಟನೆ
ಲಕ್ಷ್ಮೇಶ್ವರ,ಜೂ.13:ಪಟ್ಟಣದ ಸವಣೂರು ರಸ್ತೆಯ ಜನನಿ ಬಿಡ ಪ್ರದೇಶದಲ್ಲಿ ರಾತ್ರೋರಾತ್ರಿ ಬಾರ್ ತೆರೆಯಲು ಬಂದಾಗ ಮಾಹಿತಿ ತಿಳಿದ ನೂರಾರು ಮಹಿಳೆಯರು ಸಂಘಟಿತರಾಗಿ ಪ್ರತಿಭಟನೆ ಮಾಡಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿ ಹೋದ ಘಟನೆ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಮಂಗಳವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ವಾಹನದಲ್ಲಿ ಮದ್ಯದ ಬಾಕ್ಸ್‍ಗಳನ್ನು ಹೇರಿಕೊಂಡು ವಾಹನ ಬಂದು ಬಾರ್ ಬಳಿ ನಿಂತಿದೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ರೋಸಿ ಹೋದ ಮಹಿಳೆಯರು ರಾತ್ರೋರಾತ್ರಿ ಜಮಾಯಿಸಿ ಪ್ರತಿಭಟನೆಗೆ ಮುಂದಾದರು.
ಮಹಿಳೆಯರು ಪ್ರಾಣವನ್ನಾದರೂ ಕೊಟ್ಟೆವು ಬಾರ್ ಆರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ಈ ಹಿಂದೆಯೂ ಇದೇ ಅಂಗಡಿಯವರು ಬಾರ್ ಆರಂಭಿಸಲು ಬಂದಾಗ ತೀವ್ರ ವಿರೋಧ ವ್ಯಕ್ತಪಡಿಸಿ ಹಿಂದಕ್ಕೆ ಕಳಿಸಿದ್ದರು.
ಅನೇಕ ಮಹಿಳೆಯರು ಈ ಸಂದರ್ಭದಲ್ಲಿ ಜನನಿಬಿಡ ಪ್ರದೇಶದಲ್ಲಿ ಬಾರ್ ತೆರೆಯಲು ಅನುಮತಿ ನೀಡುವ ಅಬಕಾರಿ ಇಲಾಖೆಯವರ ಕಾರ್ಯ ವೈಖರಿಗೆ ಹಿಡಿ ಶಾಪ ಹಾಕಿದರು. ಓರ್ವ ಮಹಿಳೆ ಅತ್ಯಂತ ಉಗ್ರವಾಗಿ ಈ ಮೊದಲು ಯಾರಾದರೂ ನಮ್ಮ ಮನೆ ಎಲ್ಲಿದೆ ಎಂದು ಕೇಳಿದರೆ ಗುಡಿಯ ಮುಂದೆ ಎಂದು ಹೇಳುತ್ತಿದ್ದೆವು. ಈಗ ಬಾರ್ ಮುಂದೆ ಇದೆ ಎಂದು ಹೇಳೋಣವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಳು. ಈಗ ಮತ್ತೆ ಬಾರ್ ತೆರೆಯುವ ಪ್ರಯತ್ನ ಮಾಡಿದರೆ ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಮಹಿಳೆಯರು ಸ್ಪಷ್ಟವಾಗಿ ಹೇಳಿದ್ದಾರೆ.