ಬಾಲ ಕಾರ್ಮಿಕ ಪದ್ಧತಿಯನ್ನು ಪ್ರತಿಯೊಬ್ಬರೂ ವಿರೋಧಿಸಿ: ನ್ಯಾ.ಪುಷ್ಪಾಂಜಲಿ ದೇವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಜೂ.13: ಬಾಲ್ಯಾವ್ಯಸ್ಥೆಯಲ್ಲಿ ಮಕ್ಕಳು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕೆಂದರೆ, ಪ್ರತಿಯೊಬ್ಬರು  ಬಾಲ ಕಾರ್ಮಿಕ ಪದ್ಧತಿಯನ್ನು ವಿರೋಧ ಮಾಡಿ, ಮಕ್ಕಳಲ್ಲಿ ಶಿಕ್ಷಣದ ಕುರಿತು ಅರಿವು ಮೂಡಿಸಿ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಸ್.ಹೆಚ್.ಪುಷ್ಪಾಂಜಲಿ ದೇವಿ ಕರೆ ನೀಡಿದ್ದಾರೆ.
 “ವಿಶ್ವ ಬಾಲಜಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ” ಅಂಗವಾಗಿ ನಿನ್ನೆ  ನಗರದ ಗೃಹರಕ್ಷಕ ದಳ ಆವರಣದಿಂದ ಏರ್ಪಡಿಸಿದ್ದ ಜನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮಕ್ಕಳನ್ನು ಕೆಲಸಕ್ಕೆ ಕಳುಹಿಸುವಂತಹ ಪೋಷಕರಿಗೆ ಮತ್ತು ಕೆಲಸಕ್ಕೆ ನೇಮಿಸಿಕೊಳ್ಳುವಂತಹ ಮಾಲೀಕರಿಗೆ ಕಾನೂನಿನಡಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಧೀಶ ರಾಜೇಶ್ ಎನ್.ಹೊಸಮನೆ ನಗರದ ಎಸ್‍ಜಿಆರ್‍ಸಿಎಂ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ಬಹುಮುಖ್ಯವಾಗಿದ್ದು, ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ, ವಿದ್ಯಾವಂತರಾದಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿವಾರಣೆಯಾಗುತ್ತದೆಂದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿ, ಬಾಲ್ಯಾವ್ಯಸ್ಥೆಯಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗದೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮಿ ಉಪನ್ಯಾಸ ನೀಡಿದರು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಜಾಗೃತಿ ಜಾಥ:
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿವಿಧ ಘೋಷಣೆಗಳನ್ನು ಕೂಗಿದ್ದು ವಿಶೇಷವಾಗಿತ್ತು. ಚಿಗುರು ಕಲಾ ತಂಡದವರಿಂದ ಜಾಗೃತಿ ಗೀತೆಗಳನ್ನು ಹೇಳಿದರು.
ಜಾಥಾವು ಜಿಲ್ಲಾ ಗೃಹ ರಕ್ಷಕ ದಳ ಕಚೇರಿ ಆವರಣದಿಂದ ಆರಂಭವಾಗಿ ಕೆಎಸ್‍ಆರ್‍ಟಿಸಿ ಹೊಸ ಬಸ್ ನಿಲ್ದಾಣ, ಉಜ್ಜಿನಿ ಶಾಲೆ, ಎಪಿಎಂಸಿ ವೃತ್ತ, ಲಾರಿ ಟರ್ಮಿನಲ್ ಮೂಲಕ ಎಸ್‍ಜಿಆರ್‍ಸಿಎಂ ಕಾಲೇಜಿನ ವೇದಿಕೆ ಸಭಾಂಗಣದವರೆಗೆ ತಲುಪಿತು.