ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಸಾಧನೆ ಮಾಡಿ
ಬೈಲಹೊಂಗಲ,ಜೂ.13: ಪಟ್ಟಣದ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ 4 ರಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕಾ ಕಾನೂನು ಸೇವಾ ಸಮೀತಿ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚಾರಣೆಯನ್ನು ಆಚರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ಸರಕಾರ ವ್ಯಾಸಂಗಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ತಂದಿದೆ. ಈಗಾಗಿ ಬದುಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮಾಜದಲ್ಲಿ ಸಾಧನೆ ಮಾಡಬೇಕು. ಬಾಲ ಕಾರ್ಮಿಕತೆಯ ಈ ಅವ್ಯವಸ್ಥೆಯನ್ನು ತಡೆಯಲು ವಿದ್ಯಾರ್ಥಿಗಳು ಜಾಗೃತರಾಗಬೇಕು. ಶಿಕ್ಷಣ ಮೊಟಕುಗೊಳಿಸಿ ಜೀವನ ಹಾಳಾಗದಂತೆ ಎಚ್ಚರವಹಿಸಬೇಕೆಂದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್. ಕಸಾಳೆ, ಸಿಆರ್ಪಿ ರಾಜು ಹಕ್ಕಿ, ಮುಖ್ಯೋಪಾಧ್ಯಾಯ ಸಿ.ಬಿ.ಶೀಗಿಹಳ್ಳಿ, ದೈಹಿಕ ಶಿಕ್ಷಕ ಡಿ.ಎನ್.ಹಲಕಿ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ಹಾಗೂ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಸಿ.ಎಸ್.ಧರೆಪ್ಪನವರ ಸ್ವಾಗತಿಸಿ, ನಿರೂಪಿಸಿದರು.