ಅದ್ದೂರಿಯಾಗಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ನಂಜನಗೂಡು:ಜೂ.13: ಇಲ್ಲಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಂಜನಗೂಡು ತಾಲ್ಲೂಕು ಘಟಕ ಹಾಗೂ ಸಮಸ್ತ ವೀರಶೈವ ಲಿಂಗಾಯತ ಬಸವ ಸೇವಾ ಒಕ್ಕೂಟಗಳ ಸಹಯೋಗದೊಂದಿಗೆ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವವು ಅಭೂತಪೂರ್ವ ಮೆರವಣಿಗೆಯೊಂದಿಗೆ ಅದ್ದೂರಿ ಕಾರ್ಯಕ್ರಮ ನಡೆಯಿತು.
ಇಂದು ಬೆಳಿಗ್ಗೆ 7.00 ಗಂಟೆಗೆ ಹೊನ್ನಲಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿದರು. ಬೆಳಿಗ್ಗೆ 10.00 ಗಂಟೆಗೆ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ಶಿವಪಾದಸ್ವಾಮಿ ಗದ್ದುಗೆ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ನಂಜನಗೂಡಿನ ಇತಿಹಾಸದಲ್ಲಿ ಇವತ್ತಿನ ಬಸವಜಯಂತಿ ಅತ್ಯಂತ ಸ್ಮರಣೀಯವಾದಂತಹ ಕಾರ್ಯಕ್ರಮ ಇಲ್ಲಿ ನಡೆದಿದೆ ಎಂದರು. ನಂಜನಗೂಡು ತಾಲ್ಲೂಕಿನ ಉತ್ಸಾಹ ಯಾವುದೆಂದರೆ ಅದು ಬಸವಣ್ಣ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆದಿದೆ. ಇಲ್ಲಿ ಭಕ್ತಿ, ಶ್ರದ್ದೆ, ಪ್ರೀತಿಯಿಂದ ಈ ಕಾರ್ಯಕ್ರಮ ಆಚರಣೆಯಾಗಿದೆ ಎಂದ ಅವರು ಬಸವಣ್ಣನವರು ಯಾವುದೇ ಒಂದು ಸಮಾಜಕ್ಕಾಗಲಿ, ವರ್ಗಕ್ಕಾಗಲಿ, ಒಂದು ಭಾಷೆಗಾಗಲಿ ಸೀಮಿತರಾದಂತವರಲ್ಲ ಇದೆಲ್ಲವನ್ನು ಮೀರಿ ಇಡೀ ವಿಶ್ವಕ್ಕೆ, ಪರಿಸರಕ್ಕೆ ಸೇರಿದಂತಹ ಮಹಾನ್ ವ್ಯಕ್ತಿ ಬಸವಣ್ಣನವರು. ಅವರ ಬೆಳಕು ಎಲ್ಲರ ಜೀವನಕ್ಕೆ ಬೆಳಕಾಗಿರುವಂತದ್ದು ಎಂದರು.
ಬಸವಣ್ಣನವರ ತತ್ವಗಳು ಇವತ್ತಿನ ಜನರ ಆಧುನಿಕ ಬದುಕಿಗೆ ನಾಗಾಲೋಟದಲ್ಲಿ ಹೋಗುತ್ತಿರುವ ಸನ್ನಿವೇಶದಲ್ಲಿ ಜೀವನದಲ್ಲಿ ಬೇಕಾಗಿರುವುದು ಶಾಂತಿ ನೆಮ್ಮದಿ. ಇದಕ್ಕಾಗಿ ಬಸವಣ್ಣನವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು. ಇಂತಹ ಬಸವ ಜಯಂತಿ ದಿನ ಕೆಟ್ಟದ್ದನ್ನು ಬಿಟ್ಟು ಜೀವನಲ್ಲಿ ಉತ್ತಮವಾದ ಜೀವನ ನಡೆಸುತ್ತೇನೆ ಎಂಬ ಸಂಕಲ್ಪವನ್ನು ಮಾಡಿದಾಗ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.
ನಂತರ ಮೆರವಣಿಗೆಯಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿ, ನಂದಿಧ್ವಜ ಕುಣಿತ, ವೀರಗಾಸೆ ಕುಣಿತ, ಭಜನಾ ತಂಡಗಳು, ಜಾನಪದ ಕಲಾತಂಡ, ಅಲಂಕೃತ ಸ್ಥಬ್ಧ ಚಿತ್ರಗಳು, ಅಲಂಕೃತ ಜೋಡಿ ಎತ್ತುಗಳು, ಅಕ್ಕನ ಬಳಗದ ಪೂರ್ಣಕುಂಭ ಸ್ವಾಗತ ದೊಂದಿಗೆ ನಂಜನಗೂಡಿನ ರಾಷ್ಟ್ರಪತಿ ರಸ್ತೆಯ ಮೂಲಕ ಹುಲ್ಲಹಳ್ಳಿ ರಸ್ತೆಯಲ್ಲಿರುವ ಮಂಗಳ ಮಂಟಪಕ್ಕೆ ತರಲಾಯಿತು. ಇತ್ತೀಚಿನ ದಿನಗಳಲ್ಲಿ ಇದೊಂದು ಅಭೂತಪೂರ್ವ ಮೆರವಣಿಗೆಯೂ ಆಗಿತ್ತು.
ಮಂಗಳ ಮಂಟಪದಲ್ಲಿ ನಡೆದ ಧಾರ್ಮಿಕ ಸಮಾರಂಭವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡುತ್ತಾ ಜಗಜ್ಯೋತಿ ಬಸವಣ್ಣನವರು 900 ವರ್ಷಗಳ ಹಿಂದೆ ಮಾಡಿದಂತಹ ಸಾಮಾಜಿಕ ಸುಧಾರಣೆ ಇಂದು ವಿಕಾಸಗೊಳ್ಳುತ್ತಿದೆ. ಜಗತ್ತಿನಲ್ಲಿ ಅನೇಕ ಸಾಮಾಜಿಕ ಬದಲಾವಣೆಯ ಕ್ರಾಂತಿಗಳು ನಡೆದಿದೆ. ಆದರೆ ಸಾಮಾಜಿಕ ಸುಧಾರಣೆಯ ಪ್ರಯತ್ನಗಳು ಅಯಾಯ ಕಾಲದಲ್ಲಿ ಪ್ರಭುತ್ವವಾಗಿ ನಂತರ ಮೊಟಕುಗೊಳ್ಳುವಂತಹ ಉದಾಹರಣೆಗಳಿವೆ ಎಂದ ಶ್ರೀಗಳು ರಷ್ಯಾದಲ್ಲಿ ನಡೆದ ಕ್ರಾಂತಿಯನ್ನು ಈ ಸಂಧರ್ಭದಲ್ಲಿ ನೆನೆಪಿಸಿಕೊಂಡ ಅವರು ಆದರೆ 900 ವರ್ಷಗಳ ಹಿಂದೆ ಮಾಡಿದ ಸಾಮಾಜಿಕ ಸುಧಾರಣೆ ಇವತ್ತು ವಿಕಾಸ ಹೊಂದಲು ಕಾರಣವೆಂದರೆ ಅವರ ಧರ್ಮ ಮತ್ತು ಆಧ್ಯಾತ್ಮಿಕ ತಳಹದಿಯ ಮೇಲೆ ಮನುಷ್ಯನ ಜೀವನವನ್ನು ರೂಪಿಸುವಂತಹ ಪ್ರಯತ್ನವನ್ನು ಮಾಡಿದರು. ಮನುಷ್ಯ ಏನೇ ಮಾಡಿದರು ಅದಕ್ಕೆ ಧಾರ್ಮಿಕತೆ ಇದ್ದು, ಆಧ್ಯಾತ್ಮಿಕ ಚಿಂತನೆಯಿಂದ ಸೇವೆ ಮಾಡಿದಾಗ ಅದು ವೈಯಕ್ತಿಕವಾಗಿ ಸಾಮೂಹಿಕವಾಗಿ ಸಂಘಟಿತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ಬಸವಣ್ಣನವರು ಅಂದಿನ ದಿನಗಳಲ್ಲೆ ನೀಡಿ ಅನೇಕ ಸುಧಾರಣೆಗಳನ್ನು ಮಾಡಿ ಹೋದರು. ಇಂತಹ ಮಹಾತ್ಮರ ನೆನಪೇ ಮನುಷ್ಯರಿಗೆ ಹೊಸ ಚೈತನ್ಯ ಉಂಟು ಮಾಡುತ್ತದೆ. ಯಾವುದೇ ಜಯಂತಿಗಳು ವ್ಯವಹಾರಿಕವಾಗಿ ತೋರಿಕೆಯಾಗದೇ ಅದರೊಳಗೆ ಇರುವ ಅಂತರಾತ್ಮವನ್ನು ಅರ್ಥಮಾಡಿಕೊಳ್ಳಲ್ಲಿಕ್ಕೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಮುಖ್ಯ ಭಾಷಣಕಾರರಾಗಿದ್ದ ಕೆ.ಆರ್.ನಗರ ತಾಲ್ಲೂಕಿನ ಲಾಳನಹಳ್ಳಿಯ ಕಾಯಕ ರತ್ನ ಪ್ರಶಸ್ತಿ ಪುರಸ್ಕøತರಾದ ಶರಣೆ ಜಯದೇವಿ ತಾಯಿ ರವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿ ಪ್ರತಿಯೊಬ್ಬರ ಮನೆ-ಮನಗಳಲ್ಲಿ ಆಚರಿಸುವಂತಾಗಿ ಅವರ ತತ್ವ-ಆದರ್ಶಗಳನ್ನು ಅಳವಡಿಸಿಕೊಂಡರೆ ಸಾರ್ಥಕತೆಯ ಬದುಕಾಗುತ್ತದೆ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಲ್ಲನಮೂಲೆ ಮಠಾಧ್ಯಕ್ಷರಾದ ಚೆನ್ನಬಸವ ಸ್ವಾಮಿಗಳು ಮಾತನಾಡಿ, ದೇವನೂರು ಮಹಾಂತ ಸ್ವಾಮಿಗಳು, ಕನಕಪುರದ ದೇಗುಲ ಮಠದ ಕಿರಿಯ ಶ್ರೀಗಳು ಸಭೆಗೆ ಆಶೀರ್ವಚನ ನೀಡಿ ಇಂದು ನಡೆದ ಬಸವ ಜಯಂತಿ ಕಾರ್ಯಕ್ರಮವು ಆಕರ್ಷಣೀಯವಾದ ಕಾರ್ಯಕ್ರಮವಾಗಿದ್ದು, ತಾಲ್ಲೂಕಿನಾದ್ಯಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹುಮ್ಮಸ್ಸಿನಿಂದ ಭಕ್ತರು ಬಂದು ಬೃಹತ್ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಮಹಾಸಭಾದ ಅಧ್ಯಕ್ಷ ದೇವನೂರು ಮಹಾದೇವಪ್ಪ ಪ್ರಾಸ್ತವಿಕ ಭಾಷಣ ಮಾಡಿದರು.
ಪ್ರಾರಂಭದಲ್ಲಿ ಮಹಾಸಭಾದ ಅಧ್ಯಕ್ಷ ದೇವನೂರು ಮಹಾದೇವಪ್ಪ ಪ್ರಾಸ್ತವಿಕ ಭಾಷಣ ಮಾಡಿದರು. ತಾಲ್ಲೂಕಿನಾದ್ಯಂತ ಹತ್ತಾರು ಮಠದ ಸ್ವಾಮೀಜಿಗಳು ಭಾಗವಹಿಸಿದ್ದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾದ್ಯಕ್ಷ ಕೆ.ಎನ್.ಚಿನ್ನಸ್ವಾಮಿ ಕಸುವಿನಹಳ್ಳಿ, ಉಪಾಧ್ಯಕ್ಷರು ಶ್ರೀಮತಿ ಹೆಚ್.ಎಂ.ಮಂಜುಳಾ ಮಧು, ಪ್ರಧಾನ ಕಾರ್ಯದರ್ಶಿ ಬದನವಾಳು ಮಂಜುನಾಥ್, ಖಜಾಂಚಿ ಮಾಧು ತಾಂಡವಪುರ, ಸಹ ಕಾರ್ಯದರ್ಶಿ ಎಂ.ಕೆ.ಬಸವಣ್ಣ (ಶಿವಬಸಪ್ಪ) ಮುದ್ದಹಳ್ಳಿ, ಸಹ ಕಾರ್ಯದರ್ಶಿ ಶ್ರೀಮತಿ ಎನ್.ಎಂ.ಸೋಮೇಶ್ವರಿ ಹುಳಿಮಾವು, ನಿರ್ದೇಶಕರುಗಳಾದ ಡಿ.ಎಂ.ಶಿವಪ್ರಕಾಶ್ ಹೆಗ್ಗಡಹಳ್ಳಿ, ಎಸ್.ಎನ್.ಮಲ್ಲೇಶ್ ಸಿಂಧುವಳ್ಳಿಪುರ, ಲೋಕೇಶ್ ಕಲ್ಕುಂದ, ಸುಬ್ಬಣ್ಣ ತೊರಹಳ್ಳಿ, ಶ್ರೀಮತಿ ಅಕ್ಕಮಹಾದೇವಿ ಹಗಿನವಾಳು, ಸುದಾ ಚಿಕ್ಕಮಾದಪ್ಪ ಸುತ್ತೂರು, ವಿನಯ್ ಹಾಡ್ಯ (ಮಹಾಪೋಷಕ), ಶ್ರೀಮತಿ ಲಲಿತಾಂಭ ರವೀಶ್ (ಮಹಾಪೋಷಕ), ಬಿ.ಬಿ.ಶಿವನಾಗಪ್ಪ ಬಳ್ಳೂರುಹುಂಡಿ, ಗುರುಪ್ರಕಾಶ್ ನಂದಿಗುಂದ, ಶ್ರೀಮತಿ ನಂಜಮ್ಮಣಿ ಗುರುಮಲ್ಲಪ್ಪ ನಂಜನಗೂಡು, ಮಂಜುಳ ರಾಜೇಶ್ ನಂಜನಗೂಡು, ಶಂಕರ್‍ಹಾಡ್ಯ (ಮಹಾಪೋಷಕ), ಹೆಚ್.ಎಂ.ಮಹದೇವಮೂರ್ತಿ ಹಗಿನವಾಳು (ಮಹಾಪೋಷಕ), ಶಿವನಾಗಪ್ಪ ಪ್ರಚಾರ ಕೇಸರಿ ನಗರ ಘಟಕದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳ ನಿರ್ದೇಶಕರುಗಳು, ಶ್ರೀಮತಿ ಸುಮ ಶಿವನಾಗಪ್ಪ ದುಗ್ಗಹಳ್ಳಿ ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಪಧಾದಿಕಾರಿಗಳ ನಿರ್ದೇಶಕರುಗಳು, ಪಿ.ನಾಗೇಂದ್ರ(ಆದಿ) ಹೊರಳವಾಡಿ ಯುವ ಘಟಕದ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳ ನಿರ್ದೇಶಕರುಗಳು ಹಾಗೂ ಸಮಾಜದ ಪ್ರಮುಖ ಮುಖಂಡರುಗಳು, ಬಜೆಪಿ ರಾಜ್ಯ ಮುಖಂಡ ಎಸ್.ಮಹದೇವಯ್ಯ, ಬಿ.ಎಸ್.ಮಹದೇವಪ್ಪ, ಉದ್ಯಮಿ ಜಗದೀಶ್, ಕನ್ನಡ ಸಾಹಿತ್ಯ ಪರಿಷತ್‍ನ ನಿರ್ದೇಶಕ ಪ್ರಭಾಕರ್, ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ವೀರಶೈವ ಲಿಂಗಾಯತ ಬಂಧುಗಳು ಭಾಗವಹಿಸಿದ್ದರು.