ಪ್ರಜ್ಞಾವಂತ ಪ್ರಜೆಯಾಗಲು ಶಿಕ್ಷಣ ಅವಶ್ಯಕ: ರವೀಂದ್ರ ಹೆಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.13:- ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಲು, ಸುರಕ್ಷಿತ ಜೀವನ ನಡೆಸಲು ಹಾಗೂ ಪ್ರಜ್ಞಾವಂತ ಪ್ರಜೆಯಾಗಲು ಶಿಕ್ಷಣ ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವೀಂದ್ರ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರದಲ್ಲಿ ವಿಶ್ವೇಶ್ವರನಗರದ ಬಿಲ್ಡರ್ಸ್ ಅಸೋಸಿಯೇಷನ್‍ನಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂಲಭೂತ ಹಕ್ಕಾದ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯಬೇಕು. ಬಾಲಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸಿ ಅವರನ್ನು ಶಾಲೆಗೆ ಹೋಗುವಂತೆ ಪ್ರೇರೇಪಿಸಬೇಕು ಎಂದರು.
ಬೃಹತ್ ನಗರಗಳಲ್ಲಿ, ಹೋಟೆಲ್‍ಗಳಲ್ಲಿ, ಗುಜರಿ ಅಂಗಡಿಗಳಲ್ಲಿ, ಕಾರ್ಖಾನೆಗಳಲ್ಲಿ ಮುಂತಾದ ಕಡೆಗಳಲ್ಲಿ 14 ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟಬೇಕು. ಬಾಲ ಕಾರ್ಮಿಕರು ಉತ್ಪಾದಿಸುವ ಪದಾರ್ಥಗಳನ್ನು ನಾವು ತೆಗೆದುಕೊಳ್ಳದಿರುವುದರಿಂದ ಪರೋಕ್ಷವಾಗಿ ಬಾಲಕಾರ್ಮಿಕ ಪದ್ಧತಿ ನಿಷೇಧಿಸಬಹುದು ಎಂದರು.
ಬಾಲಕಾರ್ಮಿಕ ಮಕ್ಕಳಿಗೆ ಸುರಕ್ಷಿತ ಆರೋಗ್ಯ ಜೀವನ ಕಟ್ಟಿಕೊಡುವ ಕೆಲಸ ಮಾಡುವಲ್ಲಿ ಪ್ರತಿಯೊಬ್ಬರೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರು ಕಂಡು ಬಂದಲ್ಲಿ ಅಂತಹವರನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ವಿವಿಧ ಕಡೆಗಳಲ್ಲಿ ಬಾಲಕಾರ್ಮಿಕರು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ, ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು. ಸಂವಿಧಾನದ ಆಶಯದಂತೆ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸಬೇಕು. ಮಕ್ಕಳ ದುರ್ಬಳಕೆ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದರು.
ಶಾಲೆಗೆ ಹೋಗದಿರುವ ಮಕ್ಕಳು ಸಮಾಜದಲ್ಲಿ ಯಾವುದೇ ರೀತಿಯ ಸಮಾಜ ಘಾತುಕ ಕೆಲಸವನ್ನಾದರೂ ಮಾಡಬಹುದು. ಆದ್ದರಿಂದ ಎಲ್ಲಾ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ ಅವರಿಗೆ ಮೂಲಭೂತ ಸೌಕರ್ಯಗಳು ದೊರಕುವಂತೆ ಮಾಡಬೇಕು. ಇದಕ್ಕೆ ಜಿಲ್ಲಾಡಳಿತದ ಜೊತೆ ಎಲ್ಲಾ ಇಲಾಖೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈ ಜೋಡಿಸಿ ಸಹಕರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ದಿನೇಶ್.ಬಿ.ಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂವಿಧಾನದ ಆಶಯದಂತೆ ಬಾಲಕಾರ್ಮಿಕ ಪದ್ಧತಿ ನಿಷೇಧಿಸಿದೆ. 14 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಉದ್ಯೋಗದಲ್ಲಿ ತೊಡಗಿರುವುದನ್ನು ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಕೆಲಸಕ್ಕೆ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವ ಮೊದಲು ಮಾಲೀಕರು ಎಚ್ಚರಿಕೆ ವಹಿಸಬೇಕು. ಮಾನವನ ಜೀವನದಲ್ಲಿ ಬಾಲ್ಯಾವಸ್ಥೆ ಮತ್ತು ಶಿಕ್ಷಣ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ಇವೆರಡೂ ಉಲ್ಲಂಘನೆಯಾಗದಂತೆ ಬದ್ಧತೆಯಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದರು.
1098 ಮಕ್ಕಳ ಸಹಾಯವಾಣಿಯ ಜೊತೆಗೆ 112 ಪೆÇಲೀಸ್ ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು. ಬಹುಶಃ ಪ್ರತಿಯೊಂದು ಮಕ್ಕಳಿಗೂ ಶಿಕ್ಷಣವನ್ನು ನೀಡಿದರೆ ಬಾಲಕಾರ್ಮಿಕ ಪದ್ಧತಿಯನ್ನು ನಾಶ ಮಾಡಬಹುದು ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಕುರಿತು ಪ್ರಮಾಣ ವಚನ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ್.ಎನ್.ಟಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್‍ಗೌಡ, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ರಜಿಯಾ ಸುಲ್ತಾನ್, ಮೈಸೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ರಾಜೇಶ್ ಕೆ.ಜಾದವ್, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತೆ ಕುಸುಮ, ಆಶಾ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.