ಅಪಾಯದಲ್ಲಿರುವ ನಾಲಾ ಏರಿ: ರೈತರಿಗೆ ಆತಂಕ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.13: ತಾಲೂಕಿನ ಹರಿಹರಪುರ ಗ್ರಾಮ ವ್ಯಾಪ್ತಿಯ 14 ನೇ ಕಿ.ಮೀ ಆರಂಭದ ಸ್ಥಳದಲ್ಲಿ ಹೇಮಗಿರಿ ನಾಲೆ ಏರಿಯ ಎರಡೂ ಬದಿಗಳೂ ಕುಸಿಯುತ್ತಿದ್ದು ನಾಲೆ ಒಡೆಯುವ ಅಪಾಯಕ್ಕೆ ಸಿಲುಕಿದೆ. ನಾಲೆ ಏರಿ ಕುಸಿಯುತ್ತಿರುವುದರ ಬಗ್ಗೆ ರೈತರು ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರೂ ನೀರಾವರಿ ಇಲಾಖೆ ಮಾತ್ರ ನಾಲಾ ಏರಿಯನ್ನು ಸರಿಪಡಿಸಲು ಇದುವರೆಗೂ ಮುಂದಾಗಿಲ್ಲ. ಹೇಮಗಿರಿ ನಾಲೆಯನ್ನು 2010 ರಲ್ಲಿ ಆಧುನೀಕರಣ ಮಾಡಲಾಗಿತ್ತು. ಆಧುನೀಕರಣದ ಸಂದರ್ಭದಲ್ಲಿ ನಾಲೆಯ ಎರಡೂ ಬದಿಗಳನ್ನೂ ಸಿಮೆಂಟ್ ಲೈನಿಂಗ್ ಮಾಡಲಾಗಿತ್ತು. ಸದ್ಯ ಕಾಲುವೆ ಏರಿ 14 ಕಿ.ಮೀ ವ್ಯಾಪ್ತಿಯಲ್ಲಿ ಕುಸಿದಿದ್ದರೂ ಲೈನಿಂಗ್ ಆಧಾರದ ಮೇಲೆ ನಾಲೆ ಒಡೆಯದೆ ನಿಂತಿದೆ. ಲೈನಿಂಗ್ ತಳಭಾಗದಿಂದ ಕಾಲುವೆ ನೀರು ಸೋರಿಕೆಯಾಗುತ್ತಿದೆ. ಸದರಿ ನಾಲೆಯಿಂದ ಇದುವರೆಗೂ ಮುಂಗಾರು ಹಂಗಾಮಿನ ಬೇಸಾಯಕ್ಕೆ ನೀರು ಹರಿಸಿಲ್ಲ. ಈಗಾಗಲೇ ಜೂನ್ ತಿಂಗಳ ಮದ್ಯ ಭಾಗಕ್ಕೆ ಬಂದಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಈ ಕಾಲುವೆ ಮೂಲಕ ನೀರು ಹರಿಸುವ ಸಮಯ ಹತ್ತಿರವಾಗಿದೆ. ಆದರೆ 14 ನೇ ಕಿ.ಮೀ ಬಳಿ ಕುಸಿದಿರುವ ನಾಲಾ ಏರಿಯನ್ನು ಸರಿಪಡಿಸದಿದ್ದರೆ ನಾಲೆ ಒಡೆದು ರೈತರು ಬೆಳೆನಷ್ಠಕ್ಕೆ ಒಳಗಾಗುತ್ತಾರೆ. ಜೊತೆಗೆ ನಾಲೆಯ ಮುಂದಿನ ಹಂತದ ರೈತರು ನೀರಿಲ್ಲದ ಸಂಕಷ್ಠಕ್ಕೆ ಒಳಗಾಗುತ್ತಾರೆ.
ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ರೈತ ಸಮುದಾಯ ಮುಂಗಾರು ಹಂಗಾಮಿನ ಬೇಸಾಯದ ಸಿದ್ದತೆಯಲ್ಲಿದೆ. ಕಳೆದ ಬೇಸಿಗೆಯಲ್ಲಿ ನೀರು ಹರಿಯದೆ ಕಂಗಾಲಾಗಿದ್ದ ತಾಲೂಕಿನ ನದಿ ಅಣೆಕಟ್ಟೆಗಳಾದ ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಮತ್ತು ಹೇಮಗಿರಿ ನದಿ ಅಣೆಕಟ್ಟೆ ನಾಲಾ ವ್ಯಾಪ್ತಿಯ ರೈತರು ಮುಂದಿನ ಬೇಸಾಯಕ್ಕಾಗಿ ಕಾಲುವೆಗಳಲ್ಲಿ ನೀರು ಹರಿಯುವುದನ್ನು ಕಾಯುತ್ತಾ ಕುಳಿತಿವೆ. ಜೂನ್ ತಿಂಗಳಿನಲ್ಲಿ ಕಾಲುವೆ ಮೂಲಕ ನೀರು ಹರಿಸಲು ನೀರಾವರಿ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ನೀರು ಬಿಡುವ ಮುನ್ನ ನಾಲಾ ಏರಿಗಳ ಮೇಲೆ ಸಂಚರಿಸಿ ಕಾಲುವೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀರು ಬಿಟ್ಟಾಗ ಕಾಲುವೆ ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಆದರೆ ತಾಲೂಕು ನೀರಾವರಿ ಇಲಾಖೆ ಮಾತ್ರ ಯಾವುದೇ ಕ್ರಮವಹಿಸದೆ ದಿವ್ಯ ನಿರ್ಲಕ್ಷ್ಯದಲ್ಲಿದೆ. ಕರ್ತವ್ಯ ಪ್ರಜ್ಞೆಯನ್ನು ಮರೆತಿರುವ ನೀರಾವರಿ ಇಲಾಖೆಯ ಕಾರ್ಯವೈಕರಿ ರೈತ ಸಮುದಾಯದಲ್ಲಿ ಆತಂಕದ ಬೀಜವನ್ನು ಬಿತ್ತಿದೆ.
ತಾಲೂಕಿನ ಹೇಮಗಿರಿ ಬಳಿ ಹೇಮಾವತಿ ನದಿಗೆ ಮೈಸೂರು ಅರಸರ ಕಾಲದಲ್ಲಿ ಒಡ್ಡು ಅಣೆಕಟ್ಟೆ ನಿರ್ಮಿಸಲಾಗಿದೆ. ಈ ಅಣೆಕಟ್ಟೆಯ ನೀರಿನ ಸದ್ಬಳಕೆಗಾಗಿ ಹೇಮಗಿರಿ ನಾಲೆ ನಿರ್ಮಿಸಲಾಗಿದೆ. ಅಣೆಕಟ್ಟೆ ಆರಂಭದ ಬಂಡೀಹೊಳೆ ಗ್ರಾಮದಿಂದ ಹಿಡಿದು ವಿಠಲಾಪುರದ ವರೆಗೆ ಈ ನಾಲೆ 37 ಕಿ.ಮೀ ಉದ್ದವಿದ್ದು ಸುಮಾರು 4500 ಎಕರೆ ಭೂ ಪ್ರದೇಶಕ್ಕೆ ನೀರುಣಿಸುತ್ತದೆ. ಈ ನಾಲಾ ವ್ಯಾಪ್ತಿಯ ಶೇ 90 ರಷ್ಟು ಪ್ರದೇಶ ಭತ್ತದ ಬೆಳೆಗೆ ಹೆಸರಾಗಿದೆ. ಶತಮಾನದ ಇತಿಹಾಸ ಹೊಂದಿರುವ ಈ ನಾಲೆಯನ್ನು 2010 ರಲ್ಲಿ ಅಧುನೀಕರಣ ಮಾಡಲಾಯಿತು. ನಾಲೆಯ ಎರಡೂ ಬದಿಗಳನ್ನು ಸಿಮೆಂಟ್ ಹಾಗೂ ಕಬ್ಬಿಣ ಬಳಕೆ ಮಾಡಿ ಲೈನಿಂಗ್ ಮಾಡಲಾಯಿತು. ಆದರೆ ನಾಲಾ ಏರಿಯ ಆಧುನೀಕರಣ ಮಾಡಲಿಲ್ಲ. ಇದರ ಪರಿಣಾಮ ಹೇಮಗಿರಿ ನಾಲಾ ಏರಿ ಹಲವು ಕಡೆ ದುರ್ಬಲಗೊಂಡಿದ್ದು ಸುಧಾರಣೆಗಾಗಿ ಕಾಯುತ್ತಿದೆ. ತಕ್ಷಣವೇ ನೀರಾವರಿ ಇಲಾಖೆ ನಾಲಾ ಏರಿಯ ಉದ್ದಕ್ಕೂ ಸಂಚರಿಸಿ ದುರ್ಭಲ ಭಾಗಗಳನ್ನು ಗುರಿತಿಸಿ ಸರಿಪಡಿಸಬೇಕಾಗಿದೆ.