ಜೂ.21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ: ಡಾ.ಕುಮಾರ
ಸಂಜೆವಾಣಿ ವಾರ್ತೆ
ಮಂಡ್ಯ: ಜೂ.13:- ಜಿಲ್ಲಾಡಳಿತ ಹಾಗೂ ಆಯುಷ ಇಲಾಖೆ ಯೋಗವನ್ನು ಹೆಚ್ಚು ಜನರಿಗೆ ಪರಿಚಯಿಸಲು ಜಿಲ್ಲೆಯಲ್ಲಿ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ ಮಾತನಾಡಿದರು. ಯೋಗ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.ಇಂದಿನ ಒತ್ತಡದ ಜೀವನದಲ್ಲಿ ಅನೇಕ ರೋಗಗಳ ಪರಿಹಾರಕ್ಕೆ ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿ ಕೊಳ್ಳಬೇಕು ಎಂದರು.
ಜೂ.21ರಂದು ಬೆಳಿಗ್ಗೆ 6:30 ಗಂಟೆಗೆ ಉದ್ಘಾಟನೆ, ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಯೋಗ ಪ್ರದರ್ಶನ ಇರುತ್ತದೆ.ಇದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು,ವಿವಿಧ ಯೋಗ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ಮಳೆಗಾಲವಾಗಿರುವುದರಿಂದ ಈ ಬಾರಿ ಒಳಾಂಗಣದಲ್ಲಿ ಯೋಗಾಭ್ಯಾಸ ನಡೆಸುವುದು ಉತ್ತಮ. ಸುಮಾರು 750 ರಿಂದ 1000 ಜನ ಯೋಗಾಭ್ಯಾಸ ಮಾಡುವ ಸಭಾಂಗಣವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಯೋಗ ದಿನಾಚರಣೆ ದಿನದಂದು ಪಾಲ್ಗೊಳ್ಳುವವರಿಗೆ ಮೊದಲೇ ಯೋಗದ ಆಸನಗಳ ವಿವರ ನೀಡಿ ಪೂರ್ವಾಭ್ಯಾಸ ಮಾಡಿಸಿ ಇದರಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲಿದೆ ಎಂದರು.
ಆಯುಷ ಇಲಾಖೆ ಮೂಲಕ ಈ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು,ಕೇಂದ್ರ ಸಚಿವರು, ಸೇರಿದಂತೆ ಜನಪ್ರತಿನಿಧಿಗಳನ್ನು ಶಿಷ್ಠಾಚಾರದಂತೆ ಆಹ್ವಾನಿಸುವಂತೆ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು ಅವರು ಮಾತನಾಡಿ ಕಾರ್ಯಕ್ರಮ ಶಿಸ್ತು ಬದ್ಧವಾಗಿ ನಡೆಯಬೇಕು.ಕಾರ್ಯಕ್ರಮದಲ್ಲಿ ಭಾಗವಹಿಸುವ ಯೋಗಪಟುಗಳು ಹಾಗೂ ವಿದ್ಯಾರ್ಥಿಗಳಿಗೆ ಅವಶ್ಯಕವಿದ್ದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರಿಗೆ ವ್ಯವಸ್ಥೆ ಹಾಗೂ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿ ಎಂದರು.
ಜೂನ್ 13 ರಿಂದ 20 ರವರೆಗೆ ಯೋಗೋತ್ಸವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹೆಚ್ಚು ಜನರಿಗೆ ಯೋಗವನ್ನು ಪರಿಚಯಿಸಲು ಜೂನ್ 13 ರಿಂದ 20 ರವರೆಗೆ ವಿವಿಧ ಸ್ಥಳಗಳಲ್ಲಿ ಪ್ರತಿ ದಿನ ಬೆಳಿಗ್ಗೆ 8 ರಿಂದ 9 ರಿಂದ ಯೋಗೋತ್ಸವ ನಡೆಯಲಿದೆ. ಆಯುಷ್ ಇಲಾಖೆಯ ಯೋಗ ತರಬೇತುದಾರರು ಭಾಗವಹಿಸಿ ಯೋಗದ ಆಸನಗಳನ್ನು ಪರಿಚಯಿಸಿ ತರಬೇತಿ ನೀಡಲಿದ್ದಾರೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಅವರು ಮಾತನಾಡಿ ಜೂನ್ 13 ರಂದು ಫ್ಯಾಕ್ಟರಿ ಸರ್ಕಲ್ ಹತ್ತಿರ ಇರುವ ಸೆಂಟ್ ಜಾನ್ ಶಾಲೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ, ಜೂನ್ 14 ರಂದು ಜಿಲ್ಲೆಯ ಆಯುಷ್ ಆಸ್ಪತ್ರೆ, ಆಯುಷ್ ಚಿಕಿತ್ಸಾಲಯ ಹಾಗೂ 27 ಆಯುಷ್ಮಾನ್ ಕೇಂದ್ರಗಳಲ್ಲಿ, ಜೂನ್ 15 ರಂದು ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ, ಜೂನ್ 16 ರಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಸತಿನಿಲಯಗಳ ವಿದ್ಯಾರ್ಥಿಗಳಿಗೆ, ಜೂನ್ 17 ರಂದು ಎಸ್.ಪಿ.ವೈ.ಎಸ್.ಎಸ್ ಸಂಸ್ಥೆಯ ಸಹಯೋಗದೊಂದಿಗೆ ಗಾಯಿತ್ರಿ ಭವನದಲ್ಲಿ, ಜೂನ್ 18 ರಂದು ಮಿಮ್ಸ್ ಸಭಾಂಗಣದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ, ಜೂನ್ 19 ರಂದು ಪೆÇಲೀಸ್ ಕವಾಯತ್ ಮೈದಾನದಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮತ್ತು ಜೂನ್ 20 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಗಾಭ್ಯಾಸವನ್ನು ಸಂಘಟಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಎ.ಎಸ್.ಪಿ ಗಂಗಾಧರಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.