ಪ್ರಾಥಮಿಕ ಹಂತದಲ್ಲಿಯೇ ಗುಣಾತ್ಮಕ ಶಿಕ್ಷಣಕ್ಕೆ ಒತ್ತು:ಕಲಬುರಗಿ ವಿಭಾಗದ 1,008 ಶಾಲೆಗಳಲ್ಲಿ ಎಲ್.ಕೆ.ಜಿ.-ಯು.ಕೆ.ಜಿ. ತರಗತಿ ಪ್ರಾರಂಭ:ಡಾ.ಆಕಾಶ ಎಸ್.
ಕಲಬುರಗಿ:ಜೂ.12: ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಮತ್ತು ಆರಂಭದಲ್ಲಿಯೆ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂಬ ಸದುದ್ದೇಶದಿಂದ ರಾಜ್ಯ ಸರ್ಕಾರವು ಪ್ರಸಕ್ತ 2024-25ನೇ ಸಾಲಿನಲ್ಲಿ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ-ಯು.ಕೆ.ಜಿ.) ತರಗತಿಗಳನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಅದರಂತೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ.ಆಕಾಶ ಎಸ್. ತಿಳಿಸಿದ್ದಾರೆ.
ಅತಿಥಿ ಶಿಕ್ಷಕರ ಹಾಗೂ ಆಯಾಗಳ ನೇಮಕಾತಿ: ರಾಜ್ಯ ಸರ್ಕಾರ ಕಲಬುರಗಿ ವಿಭಾಗದ 1,008 ಆಯ್ದೆ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ-ಯು.ಕೆ.ಜಿ. ತರಗತಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ಹಂತಕ್ಕೆ ಶಾಲಾ ಹಂತದಲ್ಲಿಯೆ ನಿಯಮಾನುಸಾರ ಅತಿಥಿ ಶಿಕ್ಷಕರ ಮತ್ತು ಮಕ್ಕಳ ಪಾಲನೆಗೆ ಆಯಾ ನೇಮಕ ಮಾಡಿಕೊಳ್ಳಲಾಗುತ್ತದೆ.