ಕಲಬುರಗಿ ನಗರಕ್ಕೆ ಏಳು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಜೂ.12:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲ ಮೂಲ ನದಿಗಳಾದ ಭೀಮಾ ಮತ್ತು ಬೆಣ್ಣೆತೋರಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು, ಇದಲ್ಲದೇ ಮಳೆಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಪ್ರಯುಕ್ತ ಕಲಬುರಗಿ ನಗರಕ್ಕೆ ಇದೇ ಜೂನ್ 13 ರಿಂದ 19 ರವರೆಗೆ ಏಳು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯುಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕುಡಿಯುವ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕು. ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡ ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು. ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೆ ನಳದ ತೊಟ್ಟಿಯಲ್ಲಿ ಸೇರುವ ಮೂಲಕ ಮುಂದಿನ ಗ್ರಾಹಕರಿಗೆ ತಲುಪಲಿದೆ. ಇದರಿಂದ ಕೂಡಾ ಸಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ. ಇದರಿಂದ ನೀರು ಸಹ ಪೋಲಾಗದಂತೆ ನೋಡಿಕೊಳ್ಳಬಹುದಾಗಿದೆ.
ಸಾರ್ವಜನಿಕರು ಕಲಬುರಗಿ ಮಹಾನಗರ ಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್ ಇವರೊಂದಿಗೆ ಸಹಕರಿಸಲು ಹಾಗೂ ನೀರಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ದೂರವಾಣಿ ಸಂಖ್ಯೆ: +91 1800 425 8247 (ಛಿಛಿಛಿ) ಮತ್ತು 084-722-37247 ಗೆ ಸಂಪರ್ಕಿಸಬೇಕು.
ಕಲಬುರಗಿ ನಗರದ ಸಾರ್ವಜನಿಕರು ಮಹಾನಗರ ಪಾಲಿಕೆಗೆ ಹಾಗೂ ಎಲ್ ಆಂಡ್ ಟಿ ಕಂಪನಿಯೊಂದಿಗೆ ಸಹಕರಿಸಬೇಕೆಂದು ಕೆಯುಐಡಿಎಫ್‍ಸಿಯ ಕಾರ್ಯಪಾಲಕ ಅಭಿಯಂತರರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.