ಬೀದಿ ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ
ಕಲಬುರಗಿ,ಜೂ.12-ಬೀದಿ ನಾಯಿ ಕಚ್ಚಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ನಡೆದಿದೆ.
ರೋಹಿತ್ ತಂದೆ ಕೃಷ್ಣ (12) ಎಂಬ ಬಾಲಕನಿಗೆ ಬೀದಿ ನಾಯಿ ಕಚ್ಚಿದ್ದು, ಬಾಲಕನನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಈ ಬಾಲಕ ವಿದ್ಯಾನಗರದ ಪಂಚಶೀಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದು, ಶನಿವಾರ ಸಂಜೆ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬರುವಾಗ ಬೀದಿ ನಾಯಿಗಳು ಸೇರಿಕೊಂಡು ಕಚ್ಚಿವೆ ಎಂದು ತಿಳಿದುಬಂದಿದೆ.
ವಿದ್ಯಾನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ಕಾಟ ತಪ್ಪಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ.