ವಿದ್ಯಾನಗರ: ಒಳಚರಂಡಿ ಒಡೆದು ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು
ಕಲಬುರಗಿ,ಜೂ.12-ನಗರದ ಕೇಂದ್ರ ಬಸ್ ನಿಲ್ದಾಣ ಸಮೀಪದ ವಿದ್ಯಾನಗರ ಬಡಾವಣೆಯಲ್ಲಿ ಒಳಚರಂಡಿ ಒಡೆದು ರಸ್ತೆ ಮೇಲೆ ಮಲೀನ ನೀರು ಹರಿಯುತ್ತಿದ್ದರು ಸಂಬಂಧಪಟ್ಟವರು ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಡಾವಣೆಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಳ ಚರಂಡಿ ಒಡೆದು ವಾರ ಕಳೆದರೂ ಮಹಾನಗರ ಪಾಲಿಕೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಮಲೀನ ನೀರಿನಲ್ಲಿಯೇ ಜನ ಓಡಾಡುವಂತಾಗಿದೆ. ಮುಖ್ಯ ರಸ್ತೆಯಲ್ಲಿಯೇ ಒಳ ಚರಂಡಿ ಒಡೆದು ಮಲೀನ ನೀರು ಹರಿದು ಹೋಗುತ್ತಿದ್ದರೂ ಕಣ್ಣೆತ್ತಿ ನೋಡುತ್ತಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವವರು, ಅಕ್ಕಪಕ್ಕದ ಮನೆಯವರು, ಅಂಗಡಿಗಳ ಮಾಲೀಕರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ. ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮುಖ್ಯ ರಸ್ತೆಯಲ್ಲಿಯೇ ಒಳ ಚರಂಡಿ ಒಡೆದರೂ ಯಾರೂ ನಿಗಾ ವಹಿಸುತ್ತಿಲ್ಲ. ನಿತ್ಯ ಈ ರಸ್ತೆಯಲ್ಲಿ ಆಟೋ ಸೇರಿದಂತೆ ನೂರಾರು ವಾಹನಗಳು, ಜನರು ಓಡಾಡುತ್ತಾರೆ. ಇದೇ ಮಾರ್ಗವಾಗಿಯೇ ಜನ ಶರಣಬಸವೇಶ್ವರ ದೇವಸ್ಥಾನಕ್ಕೂ ಹೋಗಬೇಕಾಗುತ್ತದೆ. ಆದರೆ ಮಹಾನಗರ ಪಾಲಿಕೆ ಮಾತ್ರ ಒಂದುವಾರ ಕಳೆದರೂ ಚರಂಡಿ ದುರಸ್ತಿಗೆ ಮುಂದಾಗಿಲ್ಲ. ಈಗಲಾದರೂ ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದು ಮಳೆಗಾಲದ ಸಂದರ್ಭವಾಗಿರುವುದರಿಂದ ಮಲೀನ ನೀರಿನಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಮಹಾನಗರ ಪಾಲಿಕೆ ಕೂಡಲೇ ಒಳಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಾಗರಿಕರು ಆಗ್ರಹಪಡಿಸಿದ್ದಾರೆ.