ಕಣ್ಣಿಗೆ ಪೊರೆ ಬರುವದು ನೈಸರ್ಗಿಕ:ಡಾ. ಪ್ರಭುಗೌಡ ಲಿಂಗದಳ್ಳಿ
ವಿಜಯಪುರ,ಜೂ.12: ವಯಸ್ಸಾದಂತೆ ಎಲ್ಲ ಅವಯವಗಳು ಶಿಥಿಲಗೊಳ್ಳುತ್ತವೆ. ಹಾಗೆಯೇ, ಕಣ್ಣಿಗೆ ಪೊರೆ ಬರುವದು ಸಹಜ. ಇದು ಕಾಯಿಲೆಯಲ್ಲ. ವಯೋ ಸಹಜ ಬದಲಾವಣೆ. ಕಣ್ಣಿನ ಪೊರೆ ಶಸ್ತ್ರಚಿಕತ್ಸೆ ಮಾಡಿಸಿಕೊಳ್ಳುವದರಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಬಹುದು ಎಂದು ನಗರದ ಸುಪ್ರಸಿದ್ಧ ಅನುಗ್ರಹ ಕಣ್ಣಿನ ಅಸ್ಪತ್ರೆಯ ವೈದ್ಯ ಡಾ. ಪ್ರಭುಗೌಡ ಪಾಟೀಲ ಲಿಂಗದಳ್ಳಿ ಹೇಳಿದರು.
ವೈಜ್ಞಾನಿಕ ಹೊಸ ಹೊಸ ಆವಿಷ್ಕಾರಗಳಿಂದಾಗಿ ಕಣ್ಣಿನ ಪೊರೆ ಚಿಕಿತ್ಸೆ ಈಗ ಅತ್ಯಂತ ಸುಲಭವಾಗಿದೆ. ಒಂದೇ ದಿನದಲ್ಲಿ ಕೆಟರ್ಯಾಕ್ಟ ಆಪರೇಶನ್ ಮಾಡಿ, ಸೂಕ್ತವಾದ ಮಸೂರವನ್ನು ಕಣ್ಣಲ್ಲಿಯೇ ಅಳವಡಿಸಲಾಗುವದು. ಅಂದೇ ಅವರು ಅಸ್ಪತ್ರೆಯಿಂದ ಮನೆಗೆ ತೆರಳಬಹುದು ಎಂದು ಹೇಳಿದರು. ಅವರು ಹಿರಿಯ ನಾಗರಿಕರ ವೇದಿಕೆ, ರೋಟರಿ ಪ್ರೊಬಸ್ ಕ್ಲಬ್(ಉತ್ತರ)ದ ಮಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಷಣ ಮಾಡುತ್ತಿದ್ದರು.
ಹಿರಿಯ ನಾಗರಿಕರು ವರ್ಷಕ್ಕೊಮ್ಮೆಯಾದರೂ ತಮ್ಮ ಕಣ್ಣಿನ ಒತ್ತಡವನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ವಿಠಲ ತೇಲೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯ ಉಪಾಧ್ಯಕ್ಷ, ಹಿರಿಯ ಸಾಹಿತಿ ಸುಭಾಸ ಯಾದವಾಡ ಸ್ವಾಗತಿಸಿದರು. ಕಾರ್ಯದರ್ಶಿ ಮಹಾದೇವ ಹಾಲಳ್ಳಿ ನಿರೂಪಿಸಿದರು. ವೇದಿಕೆಯ ಖಜಾಂಚಿ ಜಗದೀಶ ಮೋಟಗಿ ವಂದಿಸಿದರು.