ಪರಿಸರವನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬರು ತೊಡಗಬೇಕು: ಸಜ್ಜನ
ವಿಜಯಪುರ,ಜೂ.12: ಪರಿಸರ ಕಾಳಜಿಯ ಜೊತೆಗೆ ಸುಸ್ಥಿರ ಅಭಿವೃದ್ದಿಯು ಸಮಾಜಕ್ಕೆ ಮುಖ್ಯ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಬೇಕು ಎಂದು ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸಿ.ಇ.ಒ ಡಾ. ಬಾಬು ಸಜ್ಜನ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ಸಸ್ಯಶಾಸ್ತ್ರ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಿಳಾ ವಸ್ತು ಸಂಗ್ರಹಾಲಯ ಇವರುಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ತಮ್ಮ ಸಂಸ್ಥೆಯ ಪರವಾಗಿ ವಿಶ್ವವಿದ್ಯಾನಿಲಯಕ್ಕೆ ವಿವಿಧ ಬಗೆಯ 90 ಸಸಿಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಅವರು ಮಾತನಾಡಿ, ಸಾಮಾಜಿಕ ಮುಖ್ಯ ವಾಹಿನಿಗೆ ಹೊಸ ಹೊಸ ಕಾರ್ಯಾಚರಣೆ ಮೂಲಕ ಪರಿಸರವನ್ನು ಬೆಳೆಸುವ ಸಿದ್ದಾಂತದ ಪ್ರಯೋಗ ಕಡ್ಡಾಯವಾಗಿ ಆಗಬೇಕು. ಪರಿಸರದ ಬಗ್ಗೆ ಇರುವ ಕಾಳಜಿ, ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು.
ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ಮತ್ತು ಸಿಬ್ಬಂದಿ ಪ್ರಾಯೋಗಿಕ ಅಧ್ಯಯನಶೀಲರಾಗಬೇಕು. ಸಮುದಾಯದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ವಿಶ್ವವಿದ್ಯಾನಿಲಯದ ಆವರಣ ಹಸಿರು ಆವರಣವಾಗಲು ಎಲ್ಲ ಸೌಲ್ಯಭಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಸಮಾಜ ವಿಜ್ಞಾನ ನಿಕಾಯದ ಡೀನರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ ಟಿ ಸ್ವಾಗತಿಸಿ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಲಕ್ಷ್ಮಿದೇವಿ ವೈ, ಡಾ.ನಟರಾಜ ದುರ್ಗಣ್ಣವರ, ಡಾ.ಶಶಿಕಲಾ ರಾಠೋಡ, ಪ್ರೊ. ನಾಮದೇವಗೌಡ, ಪ್ರೊ.ಗವಿಸಿದ್ದಪ್ಪ ಆನಂದಹಳ್ಳಿ, ಪ್ರೊ.ಆರ್.ವಿ.ಗಂಗಶೆಟ್ಟಿ, ಪ್ರೊ.ಸಕ್ಪಾಲ್ ಹೂವಣ್ಣ, ಡಾ.ರಮೇಶ ಸೋನಕಾಂಬಳೆ, ಡಾ.ಕೆ.ಪಿ.ಸುರೇಶ, ಡಾ.ಕಲಾವತಿ ಕಾಂಬಳೆ ಹಾಗೂ ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.