ನಿರುದ್ಯೋಗಿ ಪದವಿಧರಿಗೆ ನಿರುದ್ಯೋಗ ಭತ್ಯೆ ಮಂಜೂರು ಮಾಡಲು ಮನವಿ
ಬೀದರ:ಜೂ.12:ಕರ್ನಾಟಕ ರಾಜ್ಯದಲ್ಲಿ ಪದವಿ ಪಡೆದು ಸುಮಾರು ವರ್ಷ ಕಳೆದರೂ ಕೂಡ ಉದ್ಯೋಗ ಸಿಗದ ಕಾರಣ ಪದವಿಧರರ ವಯಸ್ಸು ಮೀರಿ ಹೋಗಿದೆ. ಕೆಲವು ಕಡೆ ಉದ್ಯೋಗವಿಲ್ಲವೆಂದು ಇವರಿಗೆ ಯಾರು ಕೂಡ ಹೆಣ್ಣು ಕೊಡುತ್ತಿಲ್ಲ. ಯಾವುದೇ ಉದ್ಯೋಗವಿಲ್ಲದೇ ಬೀದಿಯ ಮೇಲೆ ಓಡಾಡುವುದರಿಂದ ಇವರಿಗೆ ಗೌರವವೇ ಇಲ್ಲದಂತಾಗಿದೆ ಎಂದು ನೂತನ ಪದವಿಧರರ ಮತಕ್ಷೇತ್ರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಂದ್ರಶೇಖರ ಬಿ. ಪಾಟೀಲ್ ರವರಿಗೆ ಅವರ ನಿವಾಸದಲ್ಲಿ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಯಿತು ಎಂದು ಮಾರುತಿ ಮಾಸ್ಟರ್ ರವರು ಪತ್ರಿಕಾ ಪ್ರಕಟನೆಯಲ್ಲಿ ಹೇಳಿಕೆ ನೀಡಿರುತ್ತಾರೆ.
ಕೆಲವು ಕುಟುಂಬಗಳಲ್ಲಿ ವಯಸ್ಸು ಮೀರಿದ ತಂದೆ-ತಾಯಿಗಳ ಮತ್ತು ಹೆಂಡತಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ ಕೂಡ ಈ ಪದವಿಧರರ ಮೇಲೆ ಇರುವುದರಿಂದ ಆರ್ಥಿಕವಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ನಿರುದ್ಯೋಗ ಪದವಿಧರರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕೂಡ ವಯಸ್ಸು ಮೀರಿದ ಪದವಿಧರರಿಗೂ ಸಹ ನಿರುದ್ಯೋಗ ಮಾಸಾಶನ (ನಿರುದ್ಯೋಗ ಭತ್ಯೆ) ನೀಡುವಂತೆ ವಿಧಾನ ಪರಿಷತ್ ಸದನದಲ್ಲಿ ಚರ್ಚಿಸಿ, ಮುಂಬರುವ 2024 ನೇ ಸಾಲಿನ ಮುಂಗಡ ಬಜೆಟ್‍ನಲ್ಲಿ ಪದವಿಧರರಿಗೆ ನಿರುದ್ಯೋಗ ಭತ್ಯೆ ಮೀಸಲಿಡುವಂತೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕೆಂದು ಮನವಿ ಪತ್ರದಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಬೀದರ ದಕ್ಷಿಣ ಕ್ಷೇತ್ರದ ಮುಖಂಡ ಮಾರುತಿ ಮಾಸ್ಟರ್, ಶ್ರೀಧರ ವಿಜ್ಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.