ಬಿಡಿಎಗೆ ವಂಚನೆ: ೭ ಮಂದಿ ವಿರುದ್ಧ ಎಫ್‌ಐಆರ್
ಬೆಂಗಳೂರು. ಸೆ.೨೫- ಬಿಡಿಎಗೆ ೪ ಕೋಟಿ ರೂ. ವಂಚನೆ ಆರೋಪ ಸಂಬಂಧ ಮಾಜಿ ಕಾರ್ಪೋರೇಟರ್ ಹನುಮಂತೇಗೌಡ ಏಳು ಮಂದಿ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಬಿಡಿಎ ಸ್ವಾದೀನಕ್ಕೆ ಒಳಪಟ್ಟಿದ್ದ ಜಾಗಕ್ಕೆ ಭೂಸ್ವಾಧಿನಕ್ಕೆ ಒಳಪಟ್ಟಿಲ್ಲ ಎಂದು ನಕಲಿ ಹಿಂಬರಹ ಸೃಷ್ಟಿಸಿ ಪ್ರಾಧಿಕಾರಕ್ಕೆ ಬರೋಬ್ಬರಿ ೪.೨೧ ಕೋಟಿ ರೂ. ವಂಚಿಸಿದ ಆರೋಪ ಎದುರಾಗಿದೆ.
ಈ ಆರೋಪ ಸಂಬಂಧ ಮಾಜಿ ಕಾರ್ಪೋರೇಟರ್ ಹನುಮಂತೇಗೌಡ ಸೇರಿ ೭ ಮಂದಿ ವಿರುದ್ಧ ಶೇಷಾದ್ರಿಪುರಂನ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಗರದ ಕೊಮ್ಮಘಟ್ಟ ಗ್ರಾಮದ ಸರ್ವೆ ನಂಬರ್ ೭೮ರಲ್ಲಿ ನಾಗರತ್ನ ಎಂಬುವವರ ಹೆಸರಿನಲ್ಲಿದ್ದ ೨ ಎಕರೆ ೨೯ ಗುಂಟೆ ಜಮೀನನ್ನು ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಹನುಮಂತೇಗೌಡ ಖಾತೆದಾರರಾದ ನಾಗರತ್ನಮ್ಮ, ಶಶೀಂದ್ರ ನಾಗರಾಜ್, ಶಶೀಂದ್ರ ನಾಗರಾಜ್, ವಾಣಿ ಶಶೀಂದ್ರ, ರವೀಂದ್ರ ಶಶೀಂದ್ರ, ಮುನಿರಾಜು ಮತ್ತು ಕೆ.ದಿವಾಕರ್ ಅವರು ಈ ಭೂಮಿ ಬಿಡಿಎ ಸ್ವಾಧೀನಕ್ಕೆ ಒಳಪಟ್ಟಿಲ್ಲ ಎಂದು ಪ್ರಾಧಿಕಾರದ ಬೋಗಸ್ ಹಿಂಬರಹ ಮತ್ತು ನಕ್ಷೆ ನೀಡಿ ಕೆ.ಎಂ. ಉದಯಕುಮಾರ್ ಎಂಬುವವರಿಗೆ ಶುದ್ಧಕ್ರಯಪತ್ರ ಮಾಡಿಕೊಟ್ಟಿದ್ದರು.
ಈ ಅಕ್ರಮದ ಬಗ್ಗೆ ಬಿಡಿಎ ವಿಶೇಷ ಕಾರ್ಯನಿರತೆ ಪಡೆ ಮತ್ತು ಜಾಗೃತದಳ ತನಿಖೆ ನಡೆಸಿ ಶೇಷಾದ್ರಿಪುರಂ ಪೊಲೀಸ್ ಠಾಣಗೆ ದೂರು ನೀಡಿತ್ತು. ಕೊಮಘಟ್ಟ ಗ್ರಾಮದ ಸರ್ವೆ ನಂಬರ್ ೭೮ರ೯ ಎಕರೆ ೨೭ ಗುಂಟೆ ಜಮೀನನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು.
ಈ ಜಮೀನಿನ ಪೈಕಿ ನಾಗರತ್ನ ಅವರಿಗೆ ೨ ಎಕರೆ ೩೪ ಗುಂಟೆ ಜಮೀನು ಸೇರಿತ್ತು. ಇದರಲ್ಲಿ ೫ ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಟ್ಟು ಉಳಿದ ೨ ಎಕರೆ ೨೯ ಗುಂಟೆ ಜಮೀನನನ್ನು ಭೂಸ್ವಾಧೀನಕ್ಕೆ ಒಳಪಟ್ಟಿದ್ದು ಉಳಿದ ೨ ಎಕರೆ ೩೦ ಗುಂಟೆ ಸ್ವಾಧೀನವಾಗಿಲ್ಲ ಎಂದು ನಂಬಿಸಿ ಮೂಲ ಖಾತದಾರರಾದ ನಾಗರತ್ನ ಅವರ ತಂದೆ ನಾಗಜೋಯಿಸ್ ಅವರಿಗೆ ಮುಂಗಡವಾಗಿ ಒಂದು ಲಕ್ಷ ರೂ. ನಿಡಿ ಅವರ ಸ್ವತ್ತಿನ ದಾಖಲಾತಿಗಳನ್ನು ಪಡೆದಿದ್ದಾರೆ ಎಂದು ದೂರಲಾಗಿತ್ತು.