ಸಂಡೂರು ಉಪ ಚುನಾವಣೆಗೆಬಿಜೆಪಿ ಕಾರ್ಯಚಟುವಟಿಕೆ ಆರಂಭ
* ಸದಸ್ಯತ್ವ ಅಭಿಯಾನ
* ಬೂತ್ ಕಮಿಟಿ ಸಭೆ
* ಮತದಾನದ ಮಹತ್ವದ ಅರಿವು
* ಕಾಂಗ್ರೆಸ್ ನ ಭ್ರಷ್ಟಾಚಾರ ತಿಳಿಸುವುದು
ಎನ್.ವೀರಭದ್ರಗೌಡ
ಬಳ್ಳಾರಿ, ಸೆ.25: ಸಧ್ಯದಲ್ಲೇ ನಡೆಯಬಹುದಾದ ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜಿಲ್ಲೆಯ ಸಂಡೂರು ಕ್ಷೇತ್ರವೂ ಒಂದಾಗಿದೆ.
ಈ ವರೆಗೆ ಈ ಕ್ಷೇತ್ರದಲ್ಲಿ ಜಯ ಕಾಣದ ಬಿಜೆಪಿ ಈ ಬಾರಿ ಗೆದ್ದು ತೋರಿಸುವ ಪ್ರಯತ್ನಕ್ಕೆ ಈಗಿನಿಂದಲೇ ಚುನಾವಣೆಯ ಸಿದ್ದತೆಯನ್ನು ನಡೆಸಿದೆ. ಅದಕ್ಕಾಗಿ ಕಾಂಗ್ರೆಸ್ ವಿರುದ್ದ ಸಭೆ, ಪ್ರತಿಭಟನೆ, ಪಕ್ಷದ ಸಂಘಟನೆಯ ಸಭೆಗಳನ್ನು ನಡೆಸಿದ ಮುಖಂಡರು. ಈಗ ಪಕ್ಷದ ಮುಖಂಡರಿಗೆ ಬೂತ್ ಮಟ್ಟದಿಂದ ಮತದಾರರ ಜಾಗೃತಿ, ಪಕ್ಷದ ಪರ ಕೆಲಸ ಮಾಡಲು ಸಂಘಟಿಸುವ ಕಾರ್ಯ ನಡೆಸಿದ್ದಾರೆ.
ಕ್ಷೇತ್ರದ ಆರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ತಲಾ ಇಬ್ಬರು ಮುಖಂಡರಿಗೆ ವಹಿಸಿ. ಸದಸ್ಯತ್ವ ಅಭಿಯಾನ ಮಾಡಲು ತಿಳಿಸಿದ್ದು. ಆ ಮೂಲಕ ಮತದಾರರಿಗೂ ಮುಂಬರುವ ಕ್ಷೇತ್ರದ ಉಪ ಚುನಾವಣೆಯ ಬಗ್ಗೆಯೂ ತಿಳಿಸುತ್ತ. ಮತದಾನದ ಮಹತ್ವನ್ನು ಹೇಳುತ್ತಿದ್ದಾರೆ. ಅಲ್ಲದೆ ಈ ಕ್ಷೇತ್ರವನ್ನು ನಿರಂತರವಾಗಿ ಆಳ್ವಿಕೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕುರಿತು ತಿಳಿಸುವ ಕೆಲಸ ನಡೆದಿದೆ.
ಇಂದು ದೇವಗಿರಿ ಜಿಪಂ ಕ್ಷೇತ್ರದ ಜವಾಬ್ದಾರಿ ಹೊತ್ತಿರುವ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎರ್ರಂಗಳಿ ತಿಮ್ಮಾರೆಡ್ಡಿ, ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ ಅವರು ಸ್ಥಳೀಯ ಮುಖಂಡರುಗಳಾದ   ಮಂಡಲ ಪ್ರದಾನ ಕಾರ್ಯದರ್ಶಿ  ಪ್ರವೀಣ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ  ಓ. ಈ. ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ  ರಾಮಾಮೂರ್ತಿ,  ಪರ್ವತ ರೆಡ್ಡಿ, ಸೋಮಲಿಂಗಾರೆಡ್ಡಿ, ಡಾ. ತಿಮ್ಮರೆಡ್ಡಿ,  ಮರೀಬಸಪ್ಪ,  ಬಸವರಾಜ್ ಹಾಗು ರುದ್ರಪ್ಪ  ಮೊದಲಾದವರೊಂದಿಗೆ ಸದಸ್ಯತ್ವ ಅಭಿಯಾನ ನಡೆಸಿದ್ದಾರೆ.
ಮೊತಲಾಕುಂಟ ಹಾಗು ಗೊಲ್ಲ ಲಿಂಗಮನಹಳ್ಳಿ, ನಾಗೇನಹಳ್ಳಿ, ಯಾರಾದಮ್ಮನಹಳ್ಳಿ, ತೋನಸಾಗೇರಿ ಹಾಗು ದೇವರಲಹಳ್ಳಿ ಮೊದಲಾದ ಗ್ರಾಮಗಳಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಸಾಧನೆಗಳು, ಈ ಹಿಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ನೀಡಿದ ಯೋಜನೆಗಳ ಬಗ್ಗೆ ತಿಳಿಸಿ ಸದಸ್ಯತ್ವ ಮಾಡಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ನಿಗಮದ ಭ್ರಷ್ಟಾಚಾರ, ಆ ಹಣದಿಂದ ಲೋಕಸಭೆ ಚುನಾವಣೆ ನಡೆಸಿ ಗೆದ್ದುದ್ದು. ಮುಡಾ ಹಗರಣ  ಮೊದಲಾದವುಗಳ ಬಗ್ಗೆ ತಿಳಿಸಿ ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮತದಾರರನ್ನು ಜಾಗೃತಿಗೊಳಿಸುವ ಕಾರ್ಯ ನಡೆದಿದೆ.
ಚುನಾವಣೆ ಯಾವಾಗಲಾದರೂ ಘೋಷಣೆಯಾಗಲಿ, ಅಭ್ಯರ್ಥಿ ಯಾರೇ ಆಗಲಿ, ಪಕ್ಷದ ಸಂಘಟನೆ ಮಾತ್ರ ನಿರಂತರ ಅದರಲ್ಲೂ ಇಂತಹ ಉಪ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ವಿಶೇಷ ಒತ್ತು ನೀಡಿ ಪಕ್ಷದ
ನಡೆಸುತ್ತಿದೆ.
ಪಕ್ಷ ನಮಗೆ ನೀಡಿರುವ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರ ಜೊತೆ ಸೇರಿ ಗ್ರಾಮಗಳಿಗೆ ತೆರಳಿ ಮಾಡುತ್ತಿದೆ.
ಎರ್ರಂಗಳಿ ತಿಮ್ಮಾರೆಡ್ಡಿ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ಬಳ್ಳಾರಿ.
ಪಕ್ಷದ ಸಂಘಟನೆ ಸಹಜ, ಆದರೆ ಈ ಬಾರಿ ಉಪ ಚುನಾವಣೆ ಬರುತ್ತಿದೆ ಎಂದ ಮೇಲೆ ಒಂದಿಷ್ಟು ಹೆಚ್ಚು ಒತ್ತು ನೀಡಿ ಬೂತ್ ಮಟ್ಟದಲ್ಲಿ ಸಂಘಟನೆ ಗಟ್ಟಿಗೊಳಿಸುತ್ತಿದೆ.
ಹೆಚ್.ಹನುಮಂತಪ್ಪ
ಮಾಜಿ ಅಧ್ಯಕ್ಷರು
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ.