ಹಳೆ ಕೋರ್ಟ್  ಫುಡ್ ಕೋರ್ಟ್ ಗೆ ಚಿಂತನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.12: ಬಳ್ಳಾರಿ ನಗರದ ಇಂದಿರಾ  (ಸಂಗಂ) ಸರ್ಕಲ್ ಸುತ್ತ ಮುತ್ತ ಹಾಗೂ ಮುನಿಸಿಪಲ್ ಕಾಲೇಜು ಕಂಪೌಂಡಿಗೆ ಅಂಟಿಕೊಂಡು ಇರುವ ನಾನ್ ವೆಜ್ ಮತ್ತು ವಿವಧ ಆಹಾರ ಖಾದ್ಯದ ಅಂಗಡಿಗಳನ್ನು ಹಳೆಯ ಕೋರ್ಟ್ ಎದುರು ಇರುವ (ಮಯೂರ ಹೊಟೇಲ್ ಗೆ ಹೋಗುವ ಒಳ ದಾರಿ) ರಸ್ತೆಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ.
ಮುನಿಷಿಪಲ್ ಹೈಸ್ಕೂಲ್ ಬಳಿ ನಾನ್ ವೆಜ್ ಬೀದಿ ಬದಿಯ ಅಂಗಡಿಗಳಿಂದ ಟ್ರಾಫಿಕ್ ಕಿರಿ ಕಿರಿ ಆಗುತ್ತಿದೆ. ಕಳೆದ ಎರೆಡು ದಿನಗಳ ಹಿಂದೆ ಅಲ್ಲಿ ಓರ್ವ ವ್ಯಕ್ತಿಗೆ ಅಪಘಾತವಾಗಿ ತೀವ್ರ ಗಾಯವಾಗಿದೆ. ಅಲ್ಲದೆ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಅಡುಗೆ ತಯಾರಿಸುವಾಗ ಕಾರದ ಪುಡಿ ವಾಹನ ಸವಾಋ ಕಣ್ಣಿಗೆ ಬಂದು ಎರಚುತ್ತಿತ್ತು.
ಅದಕ್ಕಾಗಿ ಇವನ್ನು ಸ್ಥಳಾಂತರಿಸಲು ಸಾರ್ವಜನಿಕರ ಒತ್ತಾಯವಿತ್ತು.
ಅದಕ್ಕಾಗಿ ಕೋರ್ಟ್ ಬಳಿಯ ಒಳ ರಸ್ತೆಯ ಬಳಿ  ನೂತನ ಫುಡ್ ಕೋರ್ಟ್ ಆರಂಭಿಸಲು ಚಿಂತಿಸಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಎಸ್ಎನ್ ಪೇಟೆ ಸರ್ಕಲ್ ನಿಂದ ಇಂದಿರಾ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆಯ ಎರಡೂ ಬದಿ ಇರುವ ಅಂಗಡಿಗಳನ್ನು ಶೀಘ್ರ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಹಳೆಯ ಕೋರ್ಟ್ ಎದುರಿನ ಓಣಿಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದಿರುವ ಅವರು, ಮುನಿಸಿಪಲ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಜಿಮ್ ನಿರ್ಮಾಣ ಆಗಲಿದೆ, ಅಲ್ಲದೇ ಸದ್ಯ ಅಲ್ಲಿನ ಅಂಗಡಿಗಳಿಗೂ  ಸಾಕಷ್ಟು ಅನಾನುಕೂಲಗಳು ಇದ್ದು, ಕನಿಷ್ಟ ಯಾವುದೇ ಸೌರಭ್ಯಗಳಿಲ್ಲ, ಪ್ರಸ್ತಾಪಿತ ಜಾಗದಲ್ಲಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡಲಾಗುವುದು ಇದರಿಂದ ಗ್ರಾಹಕರಿಗೂ, ಸಾಮಾನ್ಯ ಜನರಿಗೂ ಹಾಗೂ ವ್ಯಾಪಾರಸ್ಥರಿಗೂ ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಈ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕೈಗೊಳ್ಳಬೇಕಾಗಿರವ ಕಾಮಗಾರಿಗಳ ಬಗ್ಗೆ ಗುತ್ತಿಗೆದಾರರಿಗೆ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.