ಜೂ. 16 ರಂದು “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ಪ್ರದಾನ

ಸಂಜೆವಾಣಿ ವಾರ್ತೆ
ದಾವಣಗೆರೆ, ಜೂ.12; ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದಿಂದ ಪ್ರತೀವರ್ಷದಂತೆ ಈ ವರ್ಷವೂ 2023-24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ದೈವಜ್ಞ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂ. 16 ರಂದು  ಬೆಳಿಗ್ಗೆ 10-35ಕ್ಕೆ  ವಿನೋಬನಗರದ  ಶ್ರೀಮತಿ ಗೌರಮ್ಮ ನರಹರಿಶೇಟ್ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುನಾಡಿನ ಖ್ಯಾತ ಹಿರಿಯ ಕವಿ, ಸಾಹಿತಿ ಬೆಂಗಳೂರಿನ ಬಿ.ಆರ್.ಲಕ್ಷö್ಮಣ್‌ರಾವ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಸಂಸ್ಥಾಪಕರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಹಿರಿಯ ಚುಟುಕು ಕವಿ ಬೆಂಗಳೂರಿನ ಹೆಚ್.ಡುಂಡಿರಾಜ್, ಬೆಳಗಾವಿಯ ದೈವಜ್ಞ ಸಮಾಜದ ಅಧ್ಯಕ್ಷರಾದ ದಯಾನಂದ ಜಿ.ನೇತಲ್‌ಕರ್, ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ಅರುಣಾಚಲ ಎನ್.ರೇವಣಕರ್, ದಾವಣಗೆರೆಯ ಸರಫ್ ಜ್ಯೂಯರ‍್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಲ್ಲೂರು ರಾಜ್‌ಕುಮಾರ್ ಆಗಮಿಸಲಿದ್ದಾರೆ ಎಂದು ಪ್ರತಿಷ್ಠಾನದ ನಿರ್ದೇಶಕರಾದ ನಲ್ಲೂರು ಲಕ್ಷö್ಮಣ್‌ರಾವ್ ತಿಳಿಸಿದ್ದಾರೆ.
ಸಮಾರಂಭದಂದು ಬೆಳಿಗ್ಗೆ “ಶಾರದಾ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಪ್ರತಿಭಾವಂತ ಮಕ್ಕಳಿಗೆ ಅತಿಥಿಗಳ ಜತೆಗೆ ಪೂರ್ಣಕುಂಭ ಸ್ವಾಗತ, ಮಂಗಳವಾಧ್ಯದೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಕನ್ನಡ ಕಂಕಣಕಟ್ಟಿ, ಕನ್ನಡ ತಿಲಕವಿಟ್ಟು, ಪೋಷಕರೊಂದಿಗೆ ಕನ್ನಡಾರತಿ ಬೆಳಗಿ ವೇದಿಕೆಯ ಪ್ರತ್ಯೇಕವಾಗಿ ಭವ್ಯ ದಿವ್ಯ ವೇದಿಕೆಯ ಮಂಟಪದ ಸಿಂಹಾಸನದಲ್ಲಿ ಕೂರಿಸಿ ಪುಷ್ಪವೃಷ್ಟಿಯೊಂದಿಗೆ ಮಸ್ತಕದ ಮೇಲೆ ಕಿರೀಟವಿಟ್ಟು, ಸ್ಮರಣಿಕೆ, ಬಂಗಾರದ ಲೇಪನ ಮೆಡಲ್ ಹಾಕಿ ಶಾರದಾಂಭೆಯ ಸ್ಮರಣಿಕೆ ಕೊಟ್ಟು ಅವರದೇ ಭಾವಚಿತ್ರವಿರುವ ಸನ್ಮಾನ ಅಭಿನಂದನಾ ಪತ್ರ ವಿತರಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಎನ್.ಅರುಣಾಚಲ,ಪ್ರೇಮಾ ಅರುಣಾಚಲ, ನಲ್ಲೂರು ಲಕ್ಷ್ಮಣರಾವ್ ಮತ್ತಿತರರಿದ್ದರು.