ಮನಸ್ಸಿಗೆ ಆನಂದ ನೀಡುವ ಸಾಹಿತ್ಯ ಬೇಕಾಗಿದೆ : ಪವಿತ್ರ.ಎನ್.ದೇವಾಡಿಗ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೧೨;  ಮನಸ್ಸಿಗೆ ಆನಂದವನ್ನು ನೀಡುವ ಸಾಹಿತ್ಯ ಬೇಕಾಗಿದೆ ಎಂದು ಉಡುಪಿಯ ಕು.ಪವಿತ್ರಾ ಎನ್.ದೇವಾಡಿಗ ಹೇಳಿದರು.ಅವರು ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಆದಿ ಚುಂಚನಗಿರಿ ಟ್ರಸ್ಟ್ ಅಡಿಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ೧೯ನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ. ಸಾಹಿತ್ಯದ ಅಭಿರುಚಿಯನ್ನು ಶಾಲಾ ಹಂತದಲ್ಲಿಯೇ ಬೆಳೆಸಬೇಕಾಗಿದೆ. ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳ ಹುಳುಗಳನ್ನಾಗಿಸದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸುವಂತೆ ಮಾಡಬೇಕಾಗಿದೆ. ಕನ್ನಡ ಸಾಹಿತ್ಯಕ್ಕೆ ಶ್ರೀಮಂತವಾದ ಪರಂಪರೆ ಇದೆ ಇಂತಹ ಕನ್ನಡ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಾಗಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸ ಆಗಬೇಕಾಗಿದೆ ಉತ್ತಮ ಪರಿಸರವನ್ನುಂಟು ಮಾಡಿದಲ್ಲಿ ಕಲಿಕೆ ಉತ್ತಮವಾಗಲು ಸಾಧ್ಯವಾಗುತ್ತದೆ ಎಂದರಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಮಕ್ಕಳ ಸಾಹಿತ್ಯಕ್ಕೆ ವಿಶೇಷವಾದ ರೀತಿಯಲ್ಲಿ ಕೃಷಿ ಮಾಡುತ್ತಿರುವುದು ಅಭಿನಂದನಿಯವಾಗಿದೆ ಇದು ರಾಜ್ಯಾಧ್ಯಾಂತ ವಿಸ್ತರಿಸಬೇಕಾಗಿದೆ ಸರ್ಕಾರಗಳು ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಬೇಕಾಗಿದೆ ಎಂದರು.ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಕೆ.ಪಿ.ಮಾನ್ವಿ ಕರೂರು ಅವರು ಮಾತನಾಡಿ ಇತಿಹಾಸದ ಪುನರ್ ವಿಮರ್ಶೆ ಆಗಬೇಕಾಗಿದೆ. ನಾವು ಓದಿದ ಇತಿಹಾಸದಲ್ಲಿ ರಾಣಿ ಚನ್ನಬೈರಾದೇವಿ ಹಾಗೂ ಕೆಳದಿ ಚಂಪಕಾಳ ಬಗ್ಗೆಯಾಗಲಿ ಕೆಳದಿ ರಾಣಿ ಚನ್ನಮ್ಮಾಳ ಬಗ್ಗೆಯಾಗಲಿ ಎಲ್ಲಿಯೂ ಸರಿಯಾಗಿ ಬರೆಯಲೆ ಇಲ್ಲ. ಇತಿಹಾಸ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಆದರೆ ಪುರುಷ ಪ್ರಧಾನವಾದ ವ್ಯವಸ್ಥೆಯಲ್ಲಿ ಮಹಿಳೆಯ ಇತಿಹಾಸವನ್ನು ಅಳಿಸಲಾಗಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ ಗುಣಾತ್ಮಕ ಶಿಕ್ಷಣ ಮರೆಮಾಚಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡವರಿಗೆ ಮಾಸಿಕ ಹತ್ತು ಸಾವಿರ ಸಂಬಳ ಕೊಡಲಾಗುತ್ತಿದೆ ಪ್ರಸ್ತುತ ಹತ್ತು ಸಾವಿರದಲ್ಲಿ ಒಬ್ಬ ಮನುಷ್ಯ ಜೀವನ ಸಾಗಿಸುತ್ತಿರುವುದು ಬಹಳ ಕಷ್ಟಕರವಾಗಿದೆ. ಇದು ಒಂದು ರೀತಿಯ ಸರ್ಕಾರಿ ಜೀತ ಎಂದು ನಾನು ಭಾವುಸುತ್ತೇನೆ. ಈ ರೀತಿಯ ಜೀತ ಪದ್ದತಿಯಿಂದಾಗಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಅಸಾಧ್ಯವಾದದು. ಕನ್ನಡ ಸಾಹಿತ್ಯಕ್ಕೆ ಭವ್ಯ ಪರಂಪರೆ ಇದೆ ಹಿರಿಯರು ತಮ್ಮ ಬುದ್ಧಿ ಬೆವರನ್ನು ಬಸಿದು ಈ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಆದಿಕವಿಪಂಪನಿAದ ಮಹಾಕವಿ ಕುವೆಂಪು ಅವರವರೆಗೆ ಮನುಷ್ಯಪರ ಕಾಳಜಿ ಕನ್ನಡ ಸಾಹಿತ್ಯದ ಜೀವದ್ರವ್ಯವಾಗಿದೆ. ೧೨ನೇ ಶತಮಾನದ ವಚನ ಚಳುವಳಿ ವಿಶ್ವಕ್ಕೆ ನೀಡಿದ ಅನನ್ಯ ಅರಿವಿನ ಬೆಳಕಾಗಿದೆ. “ಖಡ್ಗವಾಗಲಿ ಕಾವ್ಯ- ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ” ಎಂಬ ಬಂಡಾಯದ ಘೋಷಣೆ ವಾಸ್ತವದ ಅರಿವನ್ನು ತೆರೆದಿಟ್ಟಿತು. ವಾಸ್ತವಕ್ಕೆ ಬೆನ್ನುಮಾಡುವ, ಸಮಕಾಲೀನ ಸಂಕಟಗಳಿಗೆ ಸ್ಪಂದಿಸದೇ ಬರೆಯುವ ಸಾಹಿತ್ಯ ಶೋಭೆಯಲ್ಲ. ನಾಡಿನ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸ ಆಗಬೇಕಾಗಿದೆ.ಅರಣ್ಯವಾಸಿ ರೈತರಿಗೆ ನ್ಯಾಯ ಸಿಗಬೇಕಾಗಿದೆ.ಮರ,ಗಿಡ,ಪ್ರಾಣಿ,ಪಕ್ಷಿಗಳು ನಾಶವಾಗುವುದನ್ನು ನಾನು ವಿರೋಧಿಸುತ್ತೇನೆ. ಅರಣ್ಯ ನಮ್ಮ ಜೀವನದ ಅವಿಭಾಜ್ಯ ಅಂಗವೂ ಹೌದು. ಪಾಶ್ಚಾತ್ಯರಲ್ಲಿ ಅರಣ್ಯ ಎಂದರೆ ಜನವಸತಿ ರಹಿತ ಕಾಡು ಎಂದು ಪರಿಗಣಿಸಲಾಗಿದೆ. ನಮ್ಮನಲ್ಲಿ ಕಾಡಿನೊಳಗೇ ಬದುಕು ಕಟ್ಟಿಕೊಂಡ ಸೋಲಿಗರು, ಗೊಂಡರು, ಮಲೆಮಾದಿಗರು, ಹಸಲರು ಹಾಗೇ ನಮ್ಮೂರಿನಲ್ಲಿ ವಾಸಿಸುವ ಕುಣಬಿ ಜನಾಂಗದವರೂ ಇದ್ದಾರೆ. ಇವರ ಜೀವನಕ್ಕೆ ಸರ್ಕಾರ ಇನ್ನೂ ಯಾವುದೇ ದಾರಿ ತೋರಿಸಲಿಲ್ಲ. ಅರಣ್ಯದಲ್ಲಿ ವಾಸಿಸುವವರು ೭೫ ವರ್ಷದ ದಾಖಲೆ ಕೊಡಬೇಕು ಎಂಬ ಕಾನೂನು ಹೊರಬಂದಿದೆ. ೭೫ ವರ್ಷದ, ಸ್ವಾತಂತ್ರ‍್ಯ ಪೂರ್ವದ ದಾಖಲೆಗಳು ಸರ್ಕಾರೀ ಕಛೇರಿಗಳಲ್ಲೇ ಇಲ್ಲವಾಗಿದೆ, ಕಾಡಿನಲ್ಲಿ ವಾಸಿಸುವ, ಅಕ್ಷರದ ಅರಿವು ಗೊತ್ತಿರದ ಅನಕ್ಷರಸ್ಥ ೭೫ ವರ್ಷದ ದಾಖಲೆ ಇಡಲು ಹೇಗೆ ಸಾಧ್ಯ? ಸರ್ಕಾರದ ಈ ಅಧಿನಿಯಮವನ್ನು ಕನಿಷ್ಟ ೨೫ ವರ್ಷಗಳಿಗೆ ಸೀಮಿತಗೊಳಿಸಿ ಅರಣ್ಯವಾಸಿಗಳಿಗೆ ನ್ಯಾಯ ಕೊಡಿ ಎಂಬುದು ನನ್ನ ನಿರ್ಧಾರವಾಗಿದೆ. ಇಲ್ಲವಾದಲ್ಲಿ ಅವರ ಬದುಕು ಅತಂತ್ರವಾಗಿಯೇ ಸಾಗುತ್ತದೆ. ಸಾವು ಬದುಕುಗಳು ಸಮಾನವಾಗಿರುವ ನಮ್ಮ ಜೀವನದಲ್ಲಿ ಮೇಲು ಕೀಳೆಂಬುದಿಲ್ಲ . ನಾವು ಜಾತಿ,ಧರ್ಮದ ಯಾವ ಭಾವನೆಯೂ ಇಲ್ಲದ ಬಿಳಿಯ ಹೂವುಗಳು.ಪಕ್ಷ,ರಾಜಕೀಯದ ಬಗ್ಗೆ ಯೋಚನೆಯೇ ಇಲ್ಲದ ಮಂತ್ರ ಮುಗ್ಧರು.ಆದರೆ ಇತ್ತೀಚೆಗೆ ಶಾಲಾ ಪಠ್ಯ ಪುಸ್ತಕದ ವಿಷಯದಲ್ಲಿ ಆಗಿರುವ ಗೊಂದಲಗಳನ್ನು ನಾನು ಅರಿತಿದ್ದೇನೆ.ಈ ಪಠ್ಯ ರಚನೆಯಲ್ಲಿ ಜಾತಿ,ಧರ್ಮಗಳನ್ನು ತಂದು ವಿಷ ಬೀಜವನ್ನು ಬಿತ್ತಿ,ನಮ್ಮೊಳಗೆ ಆತಂಕವನ್ನು ಸೃಷ್ಠಿಸುವ ಮನಸ್ಸುಗಳು ಹೆಚ್ಚಾಗಿವೆ ಈ ಸಮ್ಮೇಳನದ ಮೂಲಕ ನಾನು ತಿಳಿಸಲು ಇಚ್ಚಿಸುತ್ತೇನೆ.ಶಾಲಾ ಪಠ್ಯದ ವಿಷಯದಲ್ಲಿ ರಾಜಕೀಯ ಸಲ್ಲದು .ಪಠ್ಯವನ್ನು ಪಕ್ಷ ಆದಾರಿತವಾಗಿ ಬದಲಾಯಿಸುವುದನ್ನುತಕ್ಷಣ ನಿಲ್ಲಿಸಬೇಕು.ಪಕ್ಷದ ಹೊರತಾದ ಒಂದು ಸ್ವತಂತ್ರ ಸಮಿತಿ ಅಥವಾ ಆಯೋಗವನ್ನು ರಚಿಸುವಂತಾಗಬೇಕು ಎಂಬುದು ನನ್ನ ಕಳಕಳಿಯಾಗಿದೆ. ಪ್ರೌಢ ಶಾಲೆಗಳಲ್ಲಿ ಕನಿಷ್ಟ ಎರಡು ಜನ ಶಿಕ್ಷಕಿಯರು ಇರುವ ಅಗತ್ಯ ಹಾಗೂ ಅನಿವಾರ್ಯವಿದೆ.ಹದಿ ಹರೆಯ ಎನ್ನುವುದು ಬದುಕಿನ ಬಹಳ ಮುಖ್ಯ ಕ್ಷಣ. ಆ ಹೊತ್ತಿನಲ್ಲಿ ನಮ್ಮ ದೇಹದಲ್ಲಿ ಬಹಳ ವ್ಯತ್ಯಾಸ ಆಗುವ ವಯಸ್ಸು.ಈವಯೋಮಾನದಲ್ಲಿ ಧೈಹಿಕ ಹಾಗೂ ಮಾನಸಿಕವಾಗಿ ನಾವು ಬದಲಾಗುತ್ತೇವೆ. ಪ್ರೌಢ ಶಾಲೆಯ ಓದಿನ ಪ್ರತಿ ಕ್ಷಣವೂ ಸೂಕ್ಷ್ಮ ಸಂವೇದನೆಯ ಗಳಿಗೆಗಳು. ಸಾಮಾನ್ಯವಾಗಿ ಹಳ್ಳಿಯ ಬಹಳಷ್ಟುಫ್ರೌಢ ಶಾಲೆಗಳಲ್ಲಿ ಶಿಕ್ಷಕರೇ ತುಂಬಿ ಹೋಗಿದ್ದಾರೆ.ಶಿಕ್ಷಕಿಯರು ಇರುವುದು ಕಡಿಮೆ.ಅಂದರೆ ಗಂಡಸರ ಜಗತ್ತಿನಲ್ಲಿಹೆಣ್ಣು ತಬ್ಬಲಿ ಆಗಿರುವ ವ್ಯವಸ್ಥೆ ಇದು.ಇದು ಬಹಳ ಸೂಕ್ಷ್ಮ ವಿಚಾರ ಒಬ್ಬಳು ಹದಿ ಹರೆಯದ ನಾಚಿಕೆಯ ಮುದ್ದೆ ಆಗಿರುವ ಹುಡುಗಿತನ್ನ ದೈಹಿಕ ಮಾನಸಿಕ ಕಷ್ಟಗಳನ್ನು ಹೇಗೆ ತಾನೆ ಶಿಕ್ಷಕರ ಜೊತೆ ಹೇಗೆ ಹೇಳಿಕೊಂಡಾಳು? ಈ ಕಾರಣಕ್ಕೆ ನಾನು ಸರ್ಕಾರವನ್ನು ಒತ್ತಾಯಿಸುವೆ.ದಯಮಾಡಿ ಪ್ರತಿ ಶಾಲೆಯ ಹುದ್ದೆಯ ನೇಮಕಾತಿ ಮಾಡುವಾಗ ಕನಿಷ್ಟ ಇಬ್ಬರು ಶಿಕ್ಷಕಿಯನ್ನಾದರೂ ಪ್ರತಿ ಶಾಲೆಯಲ್ಲಿ ಇರುವ ಹಾಗೆ ಮಾಡಿ.ಇದು ಸಮಾನತೆಯ ಹಾದಿಯೂಕೂಡ ಹೌದು.ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ.ಕನ್ನಡ ಕನ್ನಡ ಎಂದು ಇಂಗ್ಲೀಷನ್ನು ಅಲ್ಲಗಳೆಯುವುದು ಸರಿಯಲ್ಲ. ಸರ್ಕಾರಿ ಶಾಲೆಗಳಲ್ಲಿ ಕನ್ನಡದಜೊತೆಯಲ್ಲಿ ಇಂಗ್ಲೀಷನ್ನು ಒಂದನೇ ತರಗತಿಯಿಂದ ಕಲಿಸುವ ವ್ಯವಸ್ಥೆ ಜಾರಿಯಾಗಬೇಕು. ನನ್ನೂರಿನದ್ವೀಪದಂತಹ ಶಾಲೆಗಳಿಗೂ, ಶಿವಮೊಗ್ಗದ ಪಟ್ಟಣದ ಶಾಲೆಯ ಕಲಿಕೆಗೂ ಬಹಳ ಅಂತರವಿದೆ.ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿಯಾಗಲಿ ಎಂಬುದು ನನ್ನ ಆಶಯ.ಬದುಕಿನ ಪಾಠ ಹೇಳುವ ಮೇಷ್ಟರು ಬೇಕಾಗಿದ್ದಾರೆ.ಇಂದು ನನ್ನ ಹಾಗೂ ನನ್ನಂತಹ ಹದಿಹರೆಯದ ಅನೇಕ ಮನಸ್ಸುಗಳ ಭಾವನೆಗಳನ್ನು ಇಲ್ಲಿವ್ಯಕ್ತಪಡಿಸುತ್ತಿದ್ದೇವೆ. ಆದರೆ, ಶಾಲೆಗಳು ಮನಸ್ಸಿನ ಮಾತಿಗೆ ಬೆಲೆಕೊಡದೇ ಬರೇ ಅಂಕಗಳಿಕೆಯಜೈಲುಕೋಣೆಗಳಾಗಿವೆ. ನಮಗೆ ಮಾನವೀಯತೆಯ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ನಮ್ಮ ತಲೆಯಲ್ಲಿಅಂಕಗಳಿಕೆಯ ಬೀಜವನ್ನು ಬಿತ್ತಿ ವ್ಯವಸ್ಥೆಯ ದಿಕ್ಕನ್ನು ಬದಲಾಯಿಸುತ್ತಿದ್ದಾರೆ. ಈ ಸಮ್ಮೇಳನದ ಮೂಲಕ ಕೇಳಿಕೊಳ್ಳುತ್ತೇನೆ, ನಮಗೆ ಬದುಕಿನ ಪಾಠ ಹೇಳುವ ಮೇಷ್ಟರು ಬೇಕಾಗಿದ್ದಾರೆ. ನನ್ನ ಪೋಷಕರನ್ನೂ ಸೇರಿಸಿ ಇಲ್ಲಿ ಸೇರಿದ ಎಲ್ಲರಲ್ಲಿ ವಿನಂತಿಸುತ್ತೇನೆ, ನಮಗೆ ಬದುಕಿನ ಪಾಠ ಕೇಳುವಗುರುಗಳನ್ನು ತಂದುಕೊಡಿ.ಸಮ್ಮೇಳನದ ಆಶಯಗಳು ಜಾರಿಯಾಗಲಿ.ಆತ್ಮೀಯರೇ, ನನ್ನ ಮನದಾಳದ ಇಷ್ಟು ವಿಷಯಗಳನ್ನು ಇಲ್ಲಿ ತೋಡಿಕೊಂಡಿದ್ದೇನೆ. ಈಗನಡೆಯುತ್ತಿರುವುದು ೧೯ನೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ. ಆದರೆ, ಈ ಹಿಂದೆ ನಡೆದ ೧೮ಸಮ್ಮೇಳನಗಳ ಯಾವ ಒತ್ತಾಯಗಳನ್ನೂ ಸರ್ಕಾರ ಈಡೇರಿಸಲೇ ಇಲ್ಲ. ಮಕ್ಕಳ ಸಾಹಿತ್ಯ ಸಮ್ಮೇಳನಹಾಗೂ ಮಕ್ಕಳ ಗ್ರಾಮಸಭೆಯ ನಿರ್ಣಯಗಳಿಗೆ ಸರ್ಕಾರ ಹೆಚ್ಚು ಒತ್ತುಕೊಡಲಿ ಎಂದು ಈ ಸಮ್ಮೇಳನದ ಮೂಲಕ ಆಗ್ರಹಿಸುತ್ತೇನೆ.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಆಧಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಗಳಾ ಪ್ರಸನ್ನನಾಥ ಸ್ವಾಮಿಜಿಯವರು ಮಾತನಾಡಿ ಶಿವಮೊಗ್ಗ ಜಿಲ್ಲೆ ಕುವೆಂಪು, ಲಂಕೇಶ್, ಶಿವರುದ್ರಪ್ಪ ಅನಂತಮೂರ್ತಿಗಳಂತಹ ಮಹಾನ್ ಸಾಹಿತಿಗಳ ನೆಲವಾಗಿದೆ. ಇದು ಸಾಹಿತ್ಯದಲ್ಲಿ ಅತ್ಯಂತ ಶ್ರೀಮಂತವಾದ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಇಂತಹ ಜಿಲ್ಲೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಮಕ್ಕಳ ಮನಸ್ಸುಗಳ ಮೂಲಕ ಉತ್ತಮವಾದ ಸಾಹಿತ್ಯದ ಸಂಸ್ಕಾರವನ್ನು ಬೆಳಸಬೇಕಾಗಿದೆ. ದಾರ್ಶಕರನ್ನು ಅರಿತುಕೊಳ್ಳುವ ಮೂಲಕ ನಮ್ಮ ನಾಡಿನ ಪರಂಪರೆಯನ್ನು ವಿಶ್ವಕ್ಕೆ ಸಾರುವ ಕೆಲಸ ಎಲ್ಲಾರಿಂದಲೂ ಆಗಬೇಕಾಗಿದೆ ಆ ನಿಟ್ಟಿನಲ್ಲಿ ಜಿಲ್ಲೆಯ ಡಿ.ಮಂಜುನಾಥ ಕಳೆದ ಅನೇಕ ವರ್ಷಗಳಿಂದ ಸಮ್ಮೇಳನಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರವುದು ಶ್ಲಾಘನಿಯವಾಗಿದೆ ಎಂದರು.ಕಸಾಪ ಅಧ್ಯಕ್ಷ ಡಿ.ಮಂಜುನಾಥ ಪ್ರಾಶ್ತಾವಿಕವಾಗಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಭವ್ಯ ಸುಧಾಕರ ಜಗಮನಿ ಇವರ ಪುಟಾಣಿ ಸಂಚಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ರಾಮಕೃಷ್ಣ ವಿದ್ಯಾಸಂಸ್ಥೆಯ ಶೋಭಾ ವೆಂಕಟರಮಣ, ಅನನ್ಯ ಶಿಕ್ಷಣ ಸಂಸ್ಥೆಯ ಅನನ್ಯ ಗಿರೀಶ್, ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಡಿ.ಆರ್.ಶ್ರೀನಿವಾಸ್, ಬಿ.ಜಿ.ಎಸ್.ಶಿಕ್ಷಣ ಸಂಸ್ಥೆಯ ಡಿ.ವಿ.ಸತೀಶ್ ಹಾಗೂ ಪ್ರಮುಖರಾದ ಸುಧಾಮಣಿ ವೆಂಕಟೇಶ್, ಕಸ್ತೂರಿ ಸಾಗರ, ಶಂಕರ್ ಶೇಟ್, ರಾಘವೇಂದ್ರ ನಗರ, ಭಾರತಿ ರಾಮಕೃಷ್ಣ, ಮಧುಸೂದನ್ ಐತಾಳ್, ಭೈರಾಪುರ ಶಿವಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.ಆರಂಭದಲ್ಲಿ ಸಾನ್ವಿ ಮತ್ತು ತಂಡದವರು ನಾಡಗೀತೆ ಹಾಡಿದರು, ತನ್ಮಯ್ ಮತ್ತು ಸಂಗಡಿಗರು ಪ್ರಾರ್ಥಿಸಿದರು, ದರ್ಶಿನಿ ಸ್ವಾಗತಿಸಿ ವಿದ್ಯಾಶ್ರೀ ವಂದಿಸಿ, ಮೌಲ್ಯ ಮತ್ತು ನಿರಂಜನ ನಿರೂಪಿಸಿದರು.