ಅನುದಾನ ಹೆಚ್ಚಳ: ಕ್ರಮಕ್ಕೆ ಆಗ್ರಹ
ಹುಬ್ಬಳ್ಳಿ,ಜೂ12: ರೈತರು ಬೆಳೆದ ಆಹಾರ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರದ ಅನುದಾನವನ್ನು ನೂತನ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರು ಹೆಚ್ಚಳ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು. ಈ ಮೂಲಕ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಿ ರಾಜ್ಯಕ್ಕೆ ಆಗುವ ಅನ್ಯಾಯ ತಪ್ಪಿಸಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಆಹಾರಧಾನ್ಯಗಳ ಎಂ ಎಸ್ ಪಿ ಖರೀದಿ ಅನುದಾನ ರಾಜ್ಯಕ್ಕೆ ನೀಡುವ ಪ್ರಮಾಣ ಏರಿಕೆ ಮಾಡಬೇಕು. ಪಂಜಾಬ್ ಹರಿಯಾಣ ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳನ್ನು ರೈತರಿಂದ ಶೇಕಡ 45ರಷ್ಟು ಖರೀದಿ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಶೇಕಡ ಮೂರರಷ್ಟು ಎಂ ಎಸ್ ಪಿ ಕೇಂದ್ರಗಳ ಮೂಲಕ ಖರೀದಿ ಮಾಡುತ್ತಾರೆ ಕೇಂದ್ರ ಸರ್ಕಾರ ಖರೀದಿ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ತಾರತಮ್ಯ ನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಗಮನಿಸಿ ರಾಜ್ಯದಿಂದ ಆಯ್ಕೆಯಾಗಿರುವ ಜೋಶಿ ರಾಜ್ಯದ ರೈತರ ಹಿತವನ್ನ ರಕ್ಷಿಸಬೇಕು ಎಂದರು.
ಕಳೆದ ಎಂಟು ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 700 ಕೋಟಿ ರೂ ಕಬ್ಬಿನ ಹಣ ರೈತರಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇಂಥ ಕಾರ್ಖಾನೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಇಂತಹ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿ ಎಂದರು..
ಕೇಂದ್ರ ಸರ್ಕಾರ. ಬರ. ಮಳೆಹಾನಿ. ಅತಿವೃಷ್ಟಿ ಹಾನಿ ಮಳೆ ವಿಪ್ಪತ್ತು ನಷ್ಟ ಪರಿಹಾರದ. ಎನ್ ಡಿಆರ್‍ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು ಇಲ್ಲದಿದ್ದರೆ ಬರ. ಅತಿವೃಷ್ಟಿ ಮಳೆ ಹಾನಿ. ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಬೇಕು ಎಲ್ಲಾ ರೀತಿಯ ಬೆಳೆಗಳಿಗೂ ಅನ್ವಯವಾಗುವಂತ ಪರಿಹಾರ ನೀಡುವ ನೀತಿ ಜಾರಿಗೆ ತರಬೇಕು ಈ ಬಗ್ಗೆ ರಾಜ್ಯದ ನೂತನ ಸಂಸದರು ಒತ್ತಾಯಿಸಬೇಕು ಎಂದರು.
ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತನೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ ಎಂದರು.