ಮಹಿಳೆಯರ ಮೇಲೆ ದೌರ್ಜನ್ಯ ಸಮಿತಿ ರಚನೆಗೆ ಚಿಂತಕರ ಆಗ್ರಹ
ಬೆಂಗಳೂರು, ಜೂ.೧೨- ರಾಜ್ಯ ವ್ಯಾಪಿ ನಡೆಯುತ್ತಿರುವ ಮಹಿಳೆಯರ ಮೇಲಿನ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ರಾಜ್ಯ ಸರ್ಕಾರ ಶೀಘ್ರವಾಗಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಹೋರಾಟಗಾರರು, ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ “ಮೌನ ಮುರಿಯದಿದ್ದರೆ ಈ ದಮನ ನಿಲ್ಲದು” ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದ ಹೋರಾಟಗಾರರು, ಮಹಿಳೆಯರ ಕಗ್ಗೊಲೆಗಳ ವಿರುದ್ಧ ಹಕ್ಕೊತ್ತಾಯ ಮಂಡನೆ ಮಾಡಿದರು.
ಮಹಿಳೆಯರ, ವಿದ್ಯಾರ್ಥಿನಿಯರ, ಮಕ್ಕಳ ಕಗ್ಗೊಲೆಗಳನ್ನು ತಡೆಗಟ್ಟಲು, ಹೆಣ್ಣಿನ ಕುರಿತಾದ ತಾರತಮ್ಯ, ಲೈಂಗಿಕ ಕಿರುಕುಳ, ಹಿಂಸೆ, ಹಲ್ಲೆ, ಅತ್ಯಾಚಾರಗಳ ವಿರುದ್ಧ ಇಂದು ಮಹಿಳೆಯರ ಕುರಿತು ಕಾಳಜಿಯಿರುವ, ಸಮಾಜದ ಸ್ವಾಸ್ಥ್ಯದ ಬಗ್ಗೆ ಕಳಕಳಿಯಿರುವ ಪ್ರತಿಯೊಬ್ಬರೂ ಮಾತಾಡಲೇಬೇಕು.
ಪ್ರಜ್ವಲ್ ರೇವಣ್ಣನ ಪ್ರಕರಣದ ಹಿಂದೆ ನೂರಾರು ಮಹಿಳೆಯರ ಅಸಹಾಯಕತೆಯ, ಕಣ್ಣೀರಿನ ದುರಂತ ಕಥೆಗಳಿವೆ. ಇಂತಹ ಕಾಮಣ್ಣರು ಹಾಸನದಲ್ಲಿ ಮಾತ್ರವಲ್ಲ ಎಲ್ಲಾ ಊರುಗಳಲ್ಲೂ ಇದ್ದಾರೆ. ಎಳೆಯ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು, ಕತ್ತು ಕತ್ತರಿಸಿ, ತಲೆ ಕತ್ತರಿಸಿ, ಬಹಿರಂಗವಾಗಿ ಇರಿದು ಕೊಲ್ಲುವಂತಹ ಭೀಕರ ಕೃತ್ಯಗಳು ಮಿತಿಮೀರಿ ಬೆಳೆಯುತ್ತಿವೆ.
ಅಲ್ಲದೆ, ಭಾರತದಲ್ಲಿ ಪ್ರತಿ ಘಂಟೆಗೆ ೨೬ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಘಟನೆ. ಮಂಡ್ಯ ಜಿಲ್ಲೆಯಲ್ಲಿ ಶಿಕ್ಷಕನಿಂದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ. ತೋಟದ ಮನೆಯೊಂದರಲ್ಲಿ ೯೦೦ಕ್ಕೂ ಹೆಚ್ಚು ಹೆಣ್ಣುಭ್ರೂಣಹತ್ಯೆ ಪ್ರಕರಣಗಳು, ಪಾಂಡವಪುರದಲ್ಲಿ ಕಾನೂನು ಬಾಹಿರವಾಗಿ ಲಿಂಗಪತ್ತೆಯಲ್ಲಿ ತೊಡಗಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಬಂಧನ ಹೀಗೆ ಕ್ರೂರ ಪ್ರಕರಣಗಳ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಕಳೆದ ಕೆಲವು ತಿಂಗಳುಗಳಲ್ಲಿ ನಡೆದಿರುವ ಮಹಿಳೆಯರು, ವಿದ್ಯಾರ್ಥಿನಿಯರ ಕಗ್ಗೊಲೆಗಳ, ಹೆಣ್ಣುಮಕ್ಕಳು ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳ, ಆಸಿಡ್ ದಾಳಿಗಳ ಎಲ್ಲ ಪ್ರಕರಣಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ನಿರ್ದಿಷ್ಟ ಕ್ರಮಗಳನ್ನು ಶಿಫಾರಸ್ಸು ಮಾಡಲು, ತಜ್ಞರು, ಕಾನೂನು ಪರಿಣತರು, ಸರ್ಕಾರದ ಪ್ರತಿನಿಧಿಗಳು ಮತ್ತು ಸಾಮಾಜಿಕ ಹೋರಾಟಗಾರರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಲಾಯಿತು.
ಇಂತಹ ಭೀಕರವಾದ ಕಗ್ಗೊಲೆಗಳು ಎಲ್ಲೋ ಅಲ್ಲಲ್ಲಿ ನಡೆಯುವ ಬಿಡಿ ಘಟನೆಗಳೆಂಬ ಮನೋಭಾವವನ್ನು ಬಿಟ್ಟು ಸರ್ಕಾರ ಈ ಕೂಡಲೇ ಇವುಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳನ್ನು ಕಾರ್ಯಪ್ರವೃತ್ತಗೊಳಿಸಬೇಕು.
ವಿದ್ಯಾರ್ಥಿನಿಯರು, ಮಹಿಳೆಯರು ಮತ್ತು ಸಾರ್ವಜನಿಕರು ಇಂತಹ ತೊಂದರೆಗಳಲ್ಲಿ ಸಿಲುಕಿದ್ದರೆ, ಅವುಗಳ ಬಗ್ಗೆ ಧೈರ್ಯವಾಗಿ ಬಂದು ಪೊಲೀಸ್ ಇಲಾಖೆಯನ್ನು ಮತ್ತು ಸಂಬಂಧಪಟ್ಟ ಇತರ ಸರ್ಕಾರದ ಘಟಕಗಳನ್ನು ಸಂಪರ್ಕಿಸಲು ಉತ್ತೇಜಿಸುತ್ತಾ ವಿಸ್ತೃತವಾಗಿ ಜನರಿಗೆ ಸಂದೇಶ ನೀಡಬೇಕು ಎಂದರು.