ಯೋಗ ಜೀವನದ ಪದ್ಧತಿಯಾಗಲಿ: ಡಾ.ವೆಂಕಟ್ ಕೃಷ್ಣ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.12:- ನಿತ್ಯ ಯೋಗದಿಂದ ಅನೇಕ ರೋಗಗಳ ಪರಿಹಾರಕ್ಕೆ ಉತ್ತಮ ಮಾರ್ಗ, ಯೋಗವನ್ನು ಜೀವನ ಪದ್ಧತಿಯಾಗಿ ಅಳವಡಿಸಿಕೊಂಡರೆ ಸದೃಢ ದೇಹ ಮತ್ತು ಆರೋಗ್ಯ ಹೊಂದಲು ಸದೃಢವಾಗುತ್ತದೆ ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾದ ಡಾ. ವೆಂಕಟ್ ಕೃಷ್ಣ ಕೆ.ವಿ ತಿಳಿಸಿದರು.
ನಗರದ ಗೋಕುಲಂ ನಲ್ಲಿರುವ ಸೌಗಂಧಿಕಾ ಉದ್ಯಾನವನದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸ್ವಾಸ್ಥವೃತ್ತ ಮತ್ತು ಯೋಗ ವಿಭಾಗ ವತಿಯಿಂದ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣಕ್ಕಾಗಿ ಯೋಗ ಯೋಗಾನು ಶಾಸನ 2024 ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿನನಿತ್ಯ ಜೀವನದಲ್ಲಿ ಮಹಿಳೆಯರಿಗೆ ಯೋಗ ಎಷ್ಟು ಅವಶ್ಯಕತೆ ಎಂಬುದನ್ನು ತಿಳಿಸುವುದರ ಜೊತೆಗೆ ಯೋಗದಿಂದ ಹೇಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ನಂತರ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಮುಖ ನಾಗಮಣಿ ಜೆ ನಿಯಮಿತವಾಗಿ ಯೋಗಾಭ್ಯಾಸ ಮತ್ತು ಸಾತ್ವಿಕ ಆಹಾರ ಸೇವನೆ ಮನುಷ್ಯರನ್ನು ಯಾವಾಗಲೂ ಆರೋಗ್ಯವಂತನಾಗಿ ಮಾಡುತ್ತದೆ, ರಾಷ್ಟ್ರ ಪ್ರೇಮ ಬೆಳೆಸಿಕೊಂಡು ನಿಸರ್ಗ ಪ್ರೀತಿಸಿ ಬದುಕಿ ಬಾಳಿದರೆ ಮನುಷ್ಯನ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಯೋಗಾಭ್ಯಾಸ ಮಾಡಿದರು.
ಇದೇ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಚಂದ್ರಕಲಾ , ದರ್ಶನ್ ಮೂರ್ತಿ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.