ಸರ್ಕಾರಿ ಶಾಲೆ ಮಕ್ಕಳಲ್ಲಿ ಕೀಳರಿಮೆ ಬೇಡ
ಪಾವಗಡ, ಜೂ. ೧೨- ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಎಲ್ಲ ರಂಗದಲ್ಲೂ ಮುಂಚೂಣಿಯಲ್ಲಿರುತ್ತಾರೆ ಎಂದು ಚಿತ್ರನಟ ಬಾಲಕೃಷ್ಣ ಅಭಿಮಾನಿಗಳ ಸಂಘದ ಅಧ್ಯಕ್ಷ ಮೆಡಿಕಲ್ ಗಂಗಿನೇನಿ ದೇವರಾಜ್ ಹೇಳಿದರು.
ಆಂಧ್ರದ ಹಿಂದೂಪುರ ಕ್ಷೇತ್ರದ ನೂತನ ಶಾಸಕ ಹಾಗೂ ತೆಲುಗು ಚಿತ್ರನಟ ನಂದಮೂರಿ ಬಾಲಕೃಷ್ಣ ರವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಬಿಇಒ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಪಾಠಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಕಷ್ಟಗಳು ಏನೆಂದು ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿ ಓದುವ ಮಕ್ಕಳು ಬಡವರಾಗಿರುತ್ತಾರೆ. ಆದರೆ ಹಾಗಂತ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ ಪಟ್ಟಣದ ಡಾ.ಪಿ.ನಾರಾಯಣಪ್ಪ, ಪಿ. ಮುರಳೀಧರ್ ಡಿವೈಎಸ್‌ಪಿಯಾಗಿದ್ದಾರೆ. ಕೆಎಎಸ್ ಅಧಿಕಾರಿ ರಘುನಂದನ್ ಇವರೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಇವರಂತೆ ನೀವೂ ಸಹ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ವೈ.ಆರ್. ಚೌಧರಿ ಮಾತನಾಡಿ, ೧೧೦ ವರ್ಷಗಳ ಇತಿಹಾಸ ಇರುವ ಈ ಶಾಲೆಯ ಮಕ್ಕಳು ಅದೃಷ್ಟವಂತರಾಗಿದ್ದಾರೆ. ಇಂದಿನ ಕಾರ್ಪೊರೇಟ್, ಖಾಸಗಿ ಶಾಲೆಗಳ ನಡುವೆ ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಪೈಪೋಟಿ ನೀಡಬೇಕು ಎಂದರು.
ಈ ಶಾಲೆಗೆ ಶುದ್ದ ಕುಡಿಯುವ ನೀರಿನ ಫಿಲ್ಟರ್ ಹಾಕಿಸಿಕೊಡುವುದಾಗಿ ಹೇಳಿದರು.
ಆದರ್ಶ ಶಾಲೆಯ ಮುಖ್ಯ ಶಿಕ್ಷಕ ಜಿ. ವೆಂಕಟೇಶ್ ಮಾತನಾಡಿ, ಚಿತ್ರನಟ ಬಾಲಕೃಷ್ಣ ರವರ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಗಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ಬಿಆರ್‌ಪಿ ಮುರುಗೇಶ್ ಗಚ್ಚಿನಮಠ, ಗೀತಾರಾಣಿ, ಸಿಆರ್‌ಪಿ ನರಸಿಂಹ, ಬಾಲಕೃಷ್ಣ ಅಭಿಮಾನಿ ಸಂಘದ ಪದಾಧಿಕಾರಿಗಳಾದ ಕೃಷ್ಣಪ್ಪ, ಕೊಟ್ಲಸುಬ್ರಹ್ಮಣ್ಯ, ಗಂಗಾಧರ್‌ನಾಯ್ಡು, ಪ್ರಮೋದ್, ಗಂಗಾಧರ್, ಸುಮನ್ ಲೋಕೇಶ್, ಸುಮನ್ ಲೋಕೇಶ್, ಜೂನಿಯರ್ ಬಾಲಕೃಷ್ಣ ವೀರಭದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.