ಪಿಂಚಣಿಗಾಗಿ ಆಗ್ರಹಿಸಿ ಹಿರಿಯ ನಾಗರೀಕರ ಪ್ರತಿಭಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.12:- ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪೂರ್ಣ ವೇತನದ ಮೇಲೆ ಇಪಿಎಸ್ ಪಿಂಚಣಿ ನೀಡುವಂತೆ ಆಗ್ರಹಿಸಿ ಮಂಡ್ಯ, ಮೈಸೂರು-ಚಾ.ನಗರ ಜಿಲ್ಲಾ ಹಾಲು ಒಕ್ಕೂಟದ ನಿವೃತ್ತ ನೌಕರರು ಮಂಗಳವಾರ ಇಪಿಎಫ್‍ಓ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಮೈಸೂರಿನ ಗಾಯಿತ್ರಿಪುರಂನಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ 50 ಕ್ಕೂ ಹೆಚ್ಚು ಮಂದಿ ನಿವೃತ್ತ ನೌಕರರು ಜಮಾಯಿಸಿ ನ್ಯಾಯಾಲಯದ ಆದೇಶಾನುಸಾರ ಪಿಎಫ್ ಹಣ ನೀಡುವಂತೆ ಒತ್ತಾಯಿಸಿದರು.
2022ರ ನವೆಂಬರ್ 4ರಲ್ಲಿ ಸರ್ವೋಚ್ಚ ನ್ಯಾಯಾಲಯವು ನಿವೃತ್ತ ಹಾಗೂ ಹಾಲಿ ನೌಕರರಿಗೂ ವಾಸ್ತವ ವೇತನದ ಆಧಾರದಲ್ಲಿ ಇಪಿಎಸ್ ಪಿಂಚಣಿ ಸೌಲಭ್ಯ ನೀಡಲು ಆದೇಶ ಹೊರಡಿಸಿದೆ.
ಈ ಆದೇಶದನ್ವಯ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರದಿಂದ 250ಕ್ಕೂ ಹೆಚ್ಚು ಮಂದಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ನಾವು ಪಿಎಫ್ ಕಚೇರಿಗೆ ಅಲೆಯುತ್ತಿದ್ದೇವೆ. ಇನ್ನೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. 60 ರಿಂದ 85 ವಯಸ್ಸಿನ ಅರ್ಜಿದಾರರಿಗೆ ಇಲಾಖೆ ಶೀಘ್ರ ಸ್ಪಂದಿಸಬೇಕು ಇಲ್ಲವಾದಲ್ಲಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತ ಸುಮನ್ ಗೌರವ್ ಮಾತನಾಡಿ, ಸಮಸ್ಯೆ ಕುರಿತು ಕೇಂದ್ರ ಕಚೇರಿಗೆ ಪತ್ರ ಬರೆದಿದ್ದೇವೆ. ಅಲ್ಲಿಂದ ಉತ್ತರ ಬಂದಕೂಡಲೇ ಅಥವಾ ಒಂದು ತಿಂಗಳಲ್ಲಿ ತಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬಿ.ಜಿ.ಪೂವಯ್ಯ, ವಿ.ನಾಗರಾಜ್ ಮತ್ತಿತರರು ಇದ್ದರು.