ದಲಿತ ಪ್ರಗತಿಪರ ರೈತನಿಗೆ ಕಿರುಕುಳ: ಕ್ರಮಕ್ಕೆ ಒತ್ತಾಯ
ಕೊರಟಗೆರೆ, ಜೂ. ೧೨- ಸವರ್ಣೀಯ ರೈತ ಸಂಘದ ಪದಾಧಿಕಾರಿಯೊಬ್ಬ ದಲಿತ ಪ್ರಗತಿ ಪರ ರೈತನಿಗೆ ವಿನಾ ಕಾರಣ ಕಿರುಕುಳ ನೀಡಿ ಶೋಷಣೆ ಮಾಡುತ್ತಿದ್ದು, ಆತನ ವಿರುದ್ದ ತಹಶೀಲ್ದಾರ್ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕಿನ ಕೋಳಾಲ ಹೋಬಳಿಯ ಸುಂಕದಹಳ್ಳಿಯ ದಲಿತ ವರ್ಗದ ರೈತ ಶಿವರಾಜು, ನಾನು ರೈತ ಕುಟುಂಬದವನಾಗಿದ್ದು ವ್ಯವಸಾಯದ ಜತೆಗೆ ಕೃಷಿಯೇತರ ಚಟುವಟಿಕೆ ಮಾಡುತ್ತಿದ್ದು ಹಲವಾರು ಹಸುಗಳನ್ನು ಸಾಕಿ ಹೈನುಗಾರಿಕೆಯೊಂದಿಗೆ ಸಣ್ಣ ಪ್ರಮಾಣದಲ್ಲಿ ಕೋಳಿ ಫಾರಂ ಸಹ ನಡೆಸುತ್ತಿದ್ದೇನೆ. ಈ ಕೋಳಿ ಫಾರಂ ಪ್ರಾರಂಭಿಸಲು ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಮತ್ತು ಅನುಮತಿ ಪಡೆದು ಸರ್ಕಾರದ ಎಲ್ಲ ಷರತ್ತುಗಳನ್ನು ಪಾಲಿಸುತ್ತಿದ್ದೇನೆ ಎಂದರು.
ನನ್ನ ಕೋಳಿ ಫಾರಂ ಗ್ರಾಮಠಾಣಾದಿಂದ ಸುಮಾರು ೬೫೦ ಮೀಟರ್ ದೂರದಲ್ಲಿದೆ. ಆದರೆ ನನ್ನ ಜಮೀನಿಂದ ೨೫೦ ಮೀಟರ್ ದೂರದಲ್ಲಿ ಮನೆ ಕಟ್ಟಿಕೊಂಡಿರುವ ಶಬ್ಬೀರ್ ಎನ್ನುವ ರೈತ ಸಂಘಟನೆಯ ಪದಾಧಿಕಾರಿ ನನಗೆ ಕಿರುಕುಳ ನೀಡುತ್ತಿದ್ದಾನೆ. ಶಬ್ಬೀರ್ ಕರೆದಾಗ ನಾನು ಅವರ ಜತೆ ರೈತ ಸಂಘದ ಸಂಘಟನೆಗೆ ಹಾಗೂ ಪ್ರತಿಭಟನೆಗಳಿಗೆ ಹೋಗದ ಕಾರಣ ನನ್ನ ಮೇಲೆ ಈ ರೀತಿಯ ದ್ವೇಷ ಸಾಧಿಸುತ್ತಿದ್ದು ದಲಿತ ಎನ್ನವ ಕಾರಣಕ್ಕೆ ನನ್ನ ಕೀಳು ಮಟ್ಟದ ಭಾವದಿಂದ ಮಾತನಾಡುತ್ತಾರೆ. ಇದನ್ನೆಲ್ಲಾ ನಿಲ್ಲಿಸಲು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳು ಹಾಗೂ ಪ್ರತಿ ತಿಂಗಳು ನಾನು ಕೇಳಿದಷ್ಟು ಹಣ ನೀಡು ಇಲ್ಲದಿದ್ದರೆ ನೀನು ಹೇಗೆ ಬದುಕುತ್ತಿಯೋ ನೋಡುತ್ತೇನೆ ಎಂದು ಬೆದರಿಕೆ ಹಾಕಿದ್ದು ಇದರಿಂದ ನಾನು ಮತ್ತು ನನ್ನ ಕುಟುಂಬ ಬದುಕುವುದೇ ಕಷ್ಠವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನನಗೆ ನ್ಯಾಯ ಒದಗಿಸಿ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಇತ್ತೀಚೆಗೆ ದಲಿತರು ಸ್ವಾಭಿಮಾನದಿಂದ ಬದುಕುತ್ತಿರುವುದು ಕೆಲವು ಸವರ್ಣೀಯರಲ್ಲಿ ಸಹಿಸಲಾಗುತ್ತಿಲ್ಲ. ದಲಿತ ರೈತ ಶಿವರಾಜು ರವರು ಕೋಳಾಲ ಹೋಬಳಿಯ ಗೆದ್ಮೇನಹಳ್ಲಿ ಗ್ರಾಮದಲ್ಲಿ ತನ್ನ ತಾಯಿ ನೀಡಿದ ಒಂದೂವರೆ ಎಕರೆಯಲ್ಲಿ ಜಮೀನಿನಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ಹಾಗೂ ಕೋಳಿ ಫಾರಂ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಅದೇ ಗ್ರಾಮದ ರೈತ ಸಂಘಟನೆಯ ಪದಾಧಿಕಾರಿ ಎಂದು ಹೇಳಿಕೊಂಡು ವಸೂಲಿ ಮಾಡುವ ಸಮಾಜ ಘಾತಕ ಶಬ್ಬೀರ್ ಎಂಬಾತ ಕಳೆದ ೨ ವರ್ಷಗಳಿಂದ ದಲಿತ ಪ್ರಗತಿಪರ ರೈತ ಶಿವರಾಜುಗೆ ಸಂಘಟನೆ ಹೆಸರಿನಲ್ಲಿ ಹಣಕ್ಕೆ ಪೀಡಿಸುತ್ತಿದ್ದು ಆತ ಕೊಡದೆ ಇದ್ದಕ್ಕೆ ಈ ರೀತಿಯ ತೊಂದರೆ ನೀಡಿ ಇಲಾಖೆಗಳಿಗೆ ಅರ್ಜಿ ಬರೆದು ಸುಳ್ಳು ಮಾಹಿತಿ ನೀಡುತ್ತಿದ್ದಾನೆ ಎಂದರು.
ರೈತ ಶಿವರಾಜು ರವರ ಅಕ್ಕ ಪಕ್ಕದ ಮನೆಯವರೆ ನೊಣ ಕಾಟ ಇಲ್ಲ ಎಂದು ಹೇಳುವಾಗ ದೂರದಲ್ಲಿರುವ ಈತ ದಲಿತ ರೈತನಿಗೆ ಕಿರುಕುಳ ನೀಡಲೆಂದೆ ಸುಳ್ಳು ಅರ್ಜಿಗಳನ್ನು ಸೃಷ್ಠಿ ಮಾಡಿ ಹೇಳಿಕೆ ನೀಡಿದ್ದಾನೆ. ಸದರಿ ಶಬ್ಬೀರ್ ತಾಲ್ಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಗಳು ಸೇರಿದಂತೆ ಇನ್ನಿತರ ಅಭಿವೃಧ್ದಿ ಕಾಮಗಾರಿಗಳಲ್ಲಿ ರೈತ ಸಂಘಟನೆಯ ಹೆಸರು ಹೇಳಿ ಅಧಿಕಾರಿಗಳಿಂದ ವಸೂಲಿ ಮಾಡುವ ಆರೋಪ ಇದ್ದು, ಈತ ಇತರ ಸಮಾಜ ವಿರೋಧಿ ಚಟುವಟಿಕೆಗಳು ಸಹ ಇದ್ದು ಇಂತಹವರಿಗೆ ರೈತ ಸಂಘಟನೆಗಳು ಬೆಂಬಲ ನೀಡಿದರೆ ದಲಿತ ಸಂಘಟನೆಗಳು ಅವರಿಂದ ದೂರ ಇರಬೇಕಾಗುತ್ತದೆ. ಬೇಕಾದರೆ ರೈತ ಸಂಘಟನೆಯ ಪದಾಧಿಕಾರಿಗಳೆ ಖುದ್ದು ಸ್ಥಳಕ್ಕೆ ಬೇಟಿ ನೀಡಿ ಶಬ್ಬೀರನ ಸುಳ್ಳು ಮಾಹಿತಿ ತನಿಖೆ ಮಾಡಲಿ ಎಂದರು.
ದಲಿತ ಮುಖಂಡ ಲಕ್ಷ್ಮೀನರಸಯ್ಯ ಮಾತನಾಡಿ, ಶಬ್ಬೀರ್ ಎಂಬ ಸವರ್ಣೀಯ ರೈತ ಸಂಘಟನೆಯವನು ದಲಿತ ರೈತ ಮೇಲೆ ಇಷ್ಟೊಂದು ಕಿರುಕುಳ ನೀಡಿ ದ್ವೇಷ ಸಾದಿಸುತ್ತಿದ್ದು ಮುಂದೆ ಈತನಿಂದ ದಲಿತ ರೈತನ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗುತ್ತದೆ. ಈತ ತಾಲ್ಲೂಕಿನವರನ್ನು ಬಿಟ್ಟು ಹೊರಗಿನವರನ್ನು ಕರೆಸಿ ಅರ್ಜಿ ನೀಡುತ್ತಾನೆ ಎಂದರೆ ಈತ ಎಷ್ಟೊಂದು ಸುಳ್ಳುಗಾರ ಎಂದು ಸಾಬೀತಾಗಿದೆ.
ರೈತ ಶಿವರಾಜು ವಾಸಿಸುವ ಭಾಗದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮೀಸಲಾತಿ ಆಧಾರದ ಮೇಲೆ ಶಿವಾರಾಜು ರವರ ಜನಪರ ಕಾಳಜಿ ನೋಡಿ ಶಿವರಾಜ ಮತ್ತು ಅತನ ಪತ್ನಿಯನ್ನು ಜನರು ಗ್ರಾಮ ಪಂಚಾಯ್ತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು, ಅದನ್ನು ಸಹ ಸಹಿಸಿಕೊಳ್ಳದ ಸವರ್ಣೀಯ ಶಬ್ಬೀರ್ ಅದನ್ನು ಸಹ ಉಲ್ಲೇಖ ಮಾಡಿ ದಲಿತರು ಅಧಿಕಾರವನ್ನು ಪಡೆಯಬಾರುದು ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಮೀಸಲಾತಿ ಯಾರಪ್ಪನ ಆಸ್ತಿ ಅಲ್ಲ, ಅದು ನಮ್ಮ ಹಕ್ಕು. ಶಬ್ಬೀರ್ ಇದೇ ರೀತಿ ದಲಿತರಿಗೆ ಕಿರುಕುಳ ನೀಡಿದರೆ ಅವರ ವಿರುದ್ದ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಶಿವರಾಂ, ರಂಗನಾಥ್, ಏರ್‍ಟೈಲ್ ಗೋಪಿ, ನಾಗೇಶ್, ರಾಮಸ್ವಾಮಿ, ನರಸಿಂಹರಾಜು, ನಾಗರಾಜು, ಸತೀಶ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.