ಮಕ್ಕಳಲ್ಲಿ ನಕಾರಾತ್ಮಕ ಭಾವನೆ ದೂರಮಾಡಲು ಕ್ರೀಡೆ ಸಹಕಾರಿ
ಕೋಲಾರ,ಜೂ,೧೨- ಅಂತರರಾಷ್ಟ್ರೀಯ ಆಟದ ದಿನದ ಅಂಗವಾಗಿ ಮಕ್ಕಳು ಆಟದ ಹಕ್ಕನ್ನು ಸಂಭ್ರಮಿಸಲು ಜೂ.೧೧ರ ಈ ದಿನವನ್ನು ಅಂತರರಾಷ್ಟ್ರೀಯ ಆಟದ ದಿನವಾಗಿ ವಿಶ್ವಸಂಸ್ಥೆ ಘೋಷಿಸಿದ್ದು,ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸಿ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುವ ಪ್ರಯತ್ನವಾಗಿ ಕ್ರೀಡಾಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾ.ಪಂ ಪಿಡಿಒ ಶಾಲಿನಿ ತಿಳಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಪಂ ಸಿಇಒ ಪದ್ಮ ಬಸವಂತಪ್ಪ ಅವರ ಮಾರ್ಗದರ್ಶನದಂತೆ ಗ್ರಾಮ ಪಂಚಾಯಿತಿಯ ಓದುವ ಬೆಳಕು ಕಾರ್ಯಕ್ರಮದಡಿ ಅರಿವು ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಆಟದ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಟೋಟಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಮತ್ತು ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಒಪ್ಪಿರುವ ಎಲ್ಲಾ ದೇಶಗಳಲ್ಲೂ ಈ ದಿನವನ್ನು ಆಟದ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಪಂಚದಾದ್ಯಂತ ವಿವಿಧ ದೇಶಗಳ ಸುಮಾರು ೧೦ ಸಾವಿರ ಮಕ್ಕಳು ಭಾಗವಹಿಸಿದ್ದ ಅಭಿಯಾನದಲ್ಲಿ ನೀಡಿದ ಶಿಫಾರಸ್ಸುಗಳ ಅಡಿ ಆಟದ ದಿನ ಆಚರಿಸುತ್ತಿದ್ದು, ಈ ಅಭಿಯಾನದಲ್ಲಿ ಕರ್ನಾಟಕ ರಾಜ್ಯದ ಉಡುಪಿ, ವಿಜಯನಗರ ಜಿಲ್ಲೆಯ ಮಕ್ಕಳು ಭಾಗವಹಿಸಿದ್ದರು ಎಂಬುದು ಹೆಮ್ಮೆಯ ವಿಷಯವಾಗಿದೆ ಎಂದರು.
ಅಂತರರಾಷ್ಟ್ರೀಯ ಒಡಂಬಡಿಕೆ ಅನುಸಾರವಾಗಿ ೧೮ ವಷದೊಳಗಿನ ಎಲ್ಲಾ ಮಕ್ಕಳು,ಯುವಜನರಿಗೆ ಆಡುವ ಹಕ್ಕು ಅನ್ವಯಿಸುತ್ತದೆ ಎಂದು ತಿಳಿಸಿದ ಅವರ, ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಕ್ರೀಡೆಗಳು ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದರು.
ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಮಾತನಾಡಿ, ಕ್ರೀಡೆಗಳಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ವೃದ್ದಿಗೂ ಸಹಕಾರಿಯಾಗಿದೆ, ಮಕ್ಕಳ ದೈಹಿಕ ಬೆಳವಣಿಗೆ, ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಇಂದು ಸಮಗ್ರ ಶಿಕ್ಷಣದ ಭಾಗವಾಗಿದೆ ಎಂದರು.
ಪಠ್ಯಕ್ಕೆ ಮಾತ್ರ ಸೀಮಿತವಾಗುವುದು ಬೇಡ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ಮಾನಸಿಕವಾಗಿಯೂ ನೀವು ಸಬಲರಾಗಲು ಕ್ರೀಡೆಗಳು ನಿಮ್ಮಲ್ಲಿ ಶಕ್ತಿ ತುಂಬುತ್ತವೆ ಎಂದರು.
ದೈಹಿಕ ಶಿಕ್ಷಕಿ ಲೀಲಾ ಮಾತನಾಡಿ, ಕ್ರೀಡೆಗಳಿಂದ ಸೃಜನಶೀಲತೆ,ಸಮತೆ, ಶಾಂತಿ ಸಾಮಾಜಿಕ ಸಾಮರಸ್ಯದ ಅರಿವು ಮೂಡುತ್ತದೆ, ಪರಸ್ಪರ ಸ್ನೇಹಿತರು ಒಗ್ಗೂಡಿ ಆಡುವುದರಿಂದ ಅವರಲ್ಲಿನ ಲಿಂಗ,ಜಾತಿ, ವರ್ಗ ತಾರತಮ್ಯ ದೂರವಾಗಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾದಕ ವ್ಯಸನ ಮತ್ತು ಡಿಜಿಟಲ್ ವ್ಯಸನದಂತಹ ನಕಾರಾತ್ಮಕ ಸಾಮಾಜಕ ಅಭ್ಯಾಸಗಳನ್ನು ಎದುರಿಸಲು ಆತ್ಮಸ್ಥೈರ್ಯ ತುಂಬಿ ದುಶ್ಚಟಗಳಿಂದ ದೂರವಾಗಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕ ವಿ.ಅಜಯ್ ಮಾತನಾಡಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ಅಂತರರಾಷ್ಟ್ರೀಯ ಆಟದ ದಿನ ಆಚರಿಸುತ್ತಿದ್ದು, ಎಲ್ಲ ಮಕ್ಕಳಿಗೂ ನಮ್ಮ ಗ್ರಂಥಾಲಯದ ಅರಿವು ಕೇಂದ್ರದ ಮೂಲಕ ಕ್ರೀಡೆಗಳನ್ನು ನಡೆಸಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಕಬ್ಬಡ್ಡಿ, ಖೋಖೋ, ವಾಲಿಬಾಲ್, ಚೆಸ್, ಕೇರಂಬೋರ್ಡ್ ಮತ್ತಿತರ ಸ್ಪರ್ಧೆಗಳನ್ನು ನಡೆಸಲಾಯಿತು. ನೂರಾರು ಮಕ್ಕಳು ಅತ್ಯಂತ ಖುಷಿಯಿಂದ ಆಟಗಳಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಕಾರ್ಯದರ್ಶಿ ಪ್ರಮೀಳಾ, ಶಾಲೆಯ ಶಿಕ್ಷಕರಾದ ಶ್ರೀನಿವಾಸಲು ಶ್ವೇತಾ ,ಸುಗುಣಾ, ಲೀಲಾ, ಫರೀದಾ , ಭವಾನಿ, ಸುಮಾ, ಭಾರತಿ ಮತ್ತಿತರರು ಪಾಲ್ಗೊಂಡಿದ್ದರು.