ಸರ್ಕಾರಿ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ
ತುಮಕೂರು, ಜೂ. ೧೨- ಇಲ್ಲಿನ ಶ್ರೀರಾಮನಗರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರಿಗೆ ಮನವಿ ಸಲ್ಲಿಸಿದರು.
ಈ ಶಾಲೆಯಲ್ಲಿ ಹಾಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ಈ ಕಾಲದಲ್ಲಿಯೂ ನೆಲದ ಮೇಲೆಯೇ ಕುಳಿತು ಪಾಠವನ್ನು ಆಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಮಕ್ಕಳಿಗೆ ಬ್ಲಾಕ್ ಬೋರ್ಡ್ ಸರಿಯಾಗಿ ಕಾಣಿಸದೇ ತುಂಬಾ ನೋವು ಅನುಭವಿಸುತ್ತಿರುವುದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಷೀರ್ ಅಹಮದ್ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡು ಬಡವರಾಗಿದ್ದು ಅವರು ಕೂತು ಪಾಠ ಕೇಳಲು ೨೫ ಡೆಸ್ಕ್‌ಗಳ ಜತೆಗೆ ೫ ಗ್ರೀನ್ ಬೋರ್ಡ್‌ಗಳನ್ನು ಕೊಡಿಸುವಂತೆ ಅರ್ಜಿ ಹಾಕಲಾಗಿದೆ ಎಂದರು. ತುಮಕೂರು ನಗರದ ಹೃದಯಭಾಗದಲ್ಲಿರುವ ಶ್ರೀರಾಮನಗರ ಸರ್ಕಾರಿ ಶಾಲೆಯಲ್ಲಿಯೇ ಇಷ್ಟು ಅವ್ಯವಸ್ಥೆಯ ಗೂಡಾಗಿದ್ದು, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾಡಳಿತ ತ್ವರಿತವಾಗಿ ಈ ಶಾಲೆಗೆ ಅಗತ್ಯ ಡೆಸ್ಕ್‌ಗಳನ್ನು ಮತ್ತು ಗ್ರೀನ್ ಬೋರ್ಡ್‌ಗಳನ್ನು ಒದಗಿಸಿಕೊಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ಅತೀ ಶೀಘ್ರವಾಗಿ ಕ್ರಮ ವಹಿಸುವ ಜತೆಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸು ವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ರಂಗನಾಥ್, ಸಹ ಶಿಕ್ಷಕಿ ಶೋಭ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.