ಅಸ್ಪಶ್ಯತೆ ಆಚರಣೆ ವಿರುದ್ಧ ವಚನ ಕ್ರಾಂತಿ
ಕೋಲಾರ,ಜೂ,೧೨- ಮನುಕುಲದಲ್ಲಿ ಏಕ ಭಾವತೆಗಾಗಿ ದುಡಿದ ಮಹಾಪುರುಷರ ತತ್ವಾದರ್ಶಗಳನ್ನು ಅರಿತು ಪ್ರತಿಯೊಬ್ಬರೂ ಪಾಲಿಸಬೇಕೆಂದು ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸ್ವರ್ಣಭೂಮಿ ಫೌಂಡೇಷನ್ ಹಮ್ಮಿಕೊಂಡಿದ್ದ ವಚನ ವೈಭವ ೩ನೇ ವರ್ಷದ ಕಾರ್ಯಕ್ರಮ ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ ಮತ್ತು ಆಧುನಿಕ ವಚನ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹನ್ನೇರಡನೆ ಶತಮಾನದಲ್ಲಿ ಜಾತಿ ಮತ ಧರ್ಮ ತಾರತಮ್ಯ ಅಸ್ಪೃಶ್ಯತೆ ಆಚರಣೆಗಳ ವಿರುದ್ಧ ವಚನ ಕ್ರಾಂತಿ ಮಾಡಿದ ನಾಡಿನ ಏಕೈಕ ಸಾಂಸ್ಕೃತಿಕ ರೂವಾರಿ ಭಕ್ತಿ ಭಂಡಾರಿ ಬಸವಣ್ಣನವರು ಮಾತ್ರ ಎಂದು ಅವರು ಬಣ್ಣಿಸಿದರು.
ಕೋವಿಡ್ ಕಾಲಘಟ್ಟದಲ್ಲಿ ಬಡವರಿಗೆ ದಿನಸಿ ಕಿಟ್‌ಗಳು, ಬಡ ವಿದ್ಯಾರ್ಥಿಗಳು ಪುಸ್ತಕಗಳ ನೆರವು, ವಿಕಲಚೇತನರಿಗೆ ಸೈಕಲ್ ವಿತರಣೆ ಹೀಗೆ ರಾಜ್ಯವ್ಯಾಪಿ ಅನೇಕ ಸಮಾಜ ಮುಖಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸ್ವರ್ಣ ಭೂಮಿ ಫೌಂಡೇಷನ್ ವಚನ ವೈಭವ ಕಾರ್ಯಕ್ರಮದ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ವಚನಗಳ ಸಂದೇಶ ತಲುಪುವಂತೆ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.
ಅಧ್ಯಕ್ಷತೆವಹಿಸಿದ್ದ ಕಸಾಪ ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ ಮಾತನಾಡಿ ವಚನ ವೈಭವ ಕಾರ್ಯಕ್ರಮ ಸಮಾಜದ ಅನೇಕ ಪ್ರತಿಭಾವಂತರಿಗೆ ವೇದಿಕೆಯಾಗುತ್ತಿದೆ, ವಚನ ಸಾಹಿತ್ಯವನ್ನು ಸಮಾಜಕ್ಕೆ ಪರಿಚಯಿಸುತ್ತಿದೆ, ಆಧುನಿಕ ವಚನಗಳ ಸೃಷ್ಠಿಗೆ ವೇದಿಕೆಯಾಗುತ್ತಿದೆ ಎಂದರು.
ಸ್ವರ್ಣಭೂಮಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ ಸಮಾನ ಮನಸ್ಕ ಹಲವಾರು ಸಂಘಟನೆಗಳು ಕೈಜೋಡಿಸುತ್ತಿವೆ, ಎಲ್ಲರ ಸಹಕಾರದಿಂದ ಸೇವಾ ಕಾರ್ಯಕ್ರಮಗಳ ನಡೆಸಲು ಸಾಧ್ಯವಾಗುತ್ತಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್.ಗಣೇಶ್ ಮಾತನಾಡಿ, ಸಂವಿಧಾನ ಐಪಿಸಿ ಸೆಕ್ಷನ್‌ಗಳು ಗೊತ್ತಿಲ್ಲ ಎನ್ನುವವರು ವಚನಗಳನ್ನು ಅರಿತು ಆಚರಿಸಿದರೆ ಸಂವಿಧಾನ ಅರ್ಥ ಮಾಡಿಕೊಂಡಂತೆಯೇ ಎಂದರು.
ಆಧುನಿಕ ವಚನ ಗೋಷ್ಠಿಗೆ ಚಾಲನೆ ನೀಡಿದ ರಂಗಭೂಮಿ ನಿರ್ದೇಶಕ ಡಾ.ಇಂಚರ ನಾರಾಯಣಸ್ವಾಮಿ ಮಾತನಾಡಿ ನೆಲ ಸಂಸ್ಕೃತಿಯ ಅರಿವಿಲ್ಲದೆ ಮಕ್ಕಳು ತಪ್ಪು ದಾರಿಗಿಳಿಯುತ್ತಿದ್ದಾರೆ, ವಚನಗಳನ್ನು ಪ್ರತಿ ಶಾಲೆಯಲ್ಲಿ ಸಂವಿಧಾನ ಪೀಠಿಕೆಯೊಂದಿಗೆ ದಿನಕ್ಕೊಂದು ವಚನ ಓದಿಸಿ ಮಕ್ಕಳಿಗೆ ಅರ್ಥೈಸುವ ಆದೇಶ ಆಗಬೇಕಿದೆ ಎಂದರು.
ವೇದಿಕೆಯಲ್ಲಿ ರೋಟರಿ ವಲಯ ರಾಜ್ಯಪಾಲ ಎಚ್.ರಾಮಚಂದ್ರಪ್ಪ, ಚುಸಾಪ ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಗಮನ ಶಾಂತಮ್ಮ, ದಾಸ ಸಾಹಿತ್ಯಪರಿಷತ್ತಿನ ಡಾ.ಪೋಸ್ಟ್ ನಾರಾಯಣಸ್ವಾಮಿ, ಪರ್ವತ್ ಸ್ಪೋರ್ಟ್ಸ್‌ನ ಎಂ.ಆನಂದರೆಡ್ಡಿ ನಿವೃತ್ತ ಎ.ಎಸ್.ಐ. ರವೀಂದ್ರ ಕುಮಾರ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಲಯನ್ ಜೆ.ಜಿ.ಶಿವಶೇಖರ್, ಡಾ.ಹುಸೇನಸಾಬ್ ಎಫ್ ಕೆರೂರ, ಎಂ.ಆನಂದರೆಡ್ಡಿ, ಎಲ್.ರಮೇಶ್, ಬಿ.ವಿ.ಪ್ರೇಮಾವತಿ, ಕೆ.ಬಿ.ಅನಿಲ್‌ಕುಮಾರ್, ಎಚ್.ವಿ.ಚನ್ನಕೇಶಪ್ಪ, ಎಂ.ಪ್ರಶಾಂತ್ ಕುಮಾರ್, ಎಸ್.ಶ್ವೇತ, ಎನ್.ಗಿರಿಜಮ್ಮರಿಗೆ ಶ್ರೀಗಳ ಸಾನಿಧ್ಯದಲ್ಲಿ ಬಸವ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಧುನಿಕ ವಚನ ಕವಿಗೋಷ್ಠಿಯಲ್ಲಿ ಶಾರದಮ್ಮ, ರಾಧಾ ಡಾ.ಪ್ರಕಾಶ್, ಎಸ್.ಸಿ.ರಾಜೇಶ್ವರಿ, ಜಿ.ಗೀತಾ, ಶಾಂತಮ್ಮ, ಎಂ.ಪ್ರಸನ್ನಕುಮಾರ್, ಕೆ.ವೇಣುಗೋಪಾಲ್ ಬಿ.,ಟಿ.ರಾಮಚಂದ್ರಪ್ಪ, ಹಸಿಫಾ ಬೇಗಂ, ರೂಪ ಶಿವಕುಮಾರ್, ಮಶಾಕ್ ಅಬ್ದುಲ್ ತಾಳಿಕೋಟೆ, ಕೆ.ಬಿ.ಪುಷವತಿ, ಕೃಪಾಕರರೆಡ್ಡಿ, ಚಂದ್ರಶೇಖರ್, ಬಾವುಟ ಬಸವರಾಜ್ ಮತ್ತು ಜಿ.ಸುಧಾಕರ್ ಇತರರು ಕವಿತೆಗಳನ್ನು ವಾಚಿಸಿದರು.
ವೈ.ಹರ್ಷಿತ್, ಈನೆಲ ಈ ಜನ ವೆಂಕಟಾಚಲಪತಿ, ಸುರಕ್ಷಿತ ಗಾನ ಕಲಾವೇದಿಕೆ ಗಾಯಕರಿಂದ ಗಾಯನ ಕಾರ್ಯಕ್ರಮ ನಡೆಯಿತು. ಎಂ.ನಿಶ್ಚಲ ಹಾಗೂ ಆರಾಧ್ಯ ಮತ್ತಿತತರ ಕಲಾವಿದರಿಂದ ಭರತನಾಟ್ಯಯ ಕಾರ್ಯಕ್ರಮ ಜರುಗಿತು.
ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಕಾರ್ಯಕ್ರಮ ಯಶಸ್ವಿಗೊಳಿಸಿದರು.