ಕೃಷಿ, ತೋಟಗಾರಿಕೆ ಅಭಿವೃದ್ದಿಗೆ ನೆರವಾಗಲು ಕರೆ
ಕೋಲಾರ,ಜೂ,೧೨-ಜಿಲ್ಲೆಯ ಕೃಷಿ ತೋಟಗಾರಿಕೆ ಬೆಳೆಗಳ ಅಭಿವೃದ್ಧಿ ಹಾಗೂ ಕೋಲಾರದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸಂಪುಟ ಸಚಿವರಾಗಿ ನೆರವಾಗಿ, ಸತತ ಬರ, ಅಂತರ್ಜಲ ಕುಸಿತದಿಂದ ಕಂಗೆಟ್ಟಿರುವ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಹರಿಸಲು ಕೇಂದ್ರ ನೂತನ ಸಚಿವ ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮನವಿ ಮಾಡಿದ್ದಾರೆ.
ದೆಹಲಿಗೆ ತೆರಳಿ ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಚಿವರ ಪ್ರಮಾಣ ವಚನ ಸ್ಪೀಕಾರ ಸಮಾರಂಭದಲ್ಲಿ ಭಾಗವಹಿಸಿದ ನಂತರ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಅಭಿನಂದಿಸಿದ ಅವರು ಕೋಲಾರ ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಚರ್ಚಿಸಿ ಮನವಿ ಮಾಡಿದ್ದಾರೆ.
ಕೇಂದ್ರ ಸರಕಾರದಿಂದ ಸಿಗುವ ಯಾವುದೇ ಅನುದಾನದ ಹೆಚ್ಚು ಪಾಲನ್ನು ಗಡಿ ಹಾಗೂ ನಿರ್ಲಕ್ಷಿತ ಕೋಲಾರ ಜಿಲ್ಲೆಯ ಅಭಿವೃದ್ಧಿಗಾಗಿ ನೀಡಬೇಕು, ಕೋಲಾರ ಸೇರಿದಂತೆ ರಾಜ್ಯದಲ್ಲಿ ಜೆಡಿಎಸ್ ನಾಯಕತ್ವ ಬೆಳೆಸಲು ಸಹಕರಿಸಬೇಕೆಂದು ಅವರು ಕುಮಾರಸ್ವಾಮಿಯವರಲ್ಲಿ ಕೋರಿದ್ದಾರೆ.
ಕೋಲಾರ ಜಿಲ್ಲೆಯು ಶಾಶ್ವತ ನದಿ ನಾಲೆಗಳು ಇಲ್ಲದೆ ಇರುವ ಜಿಲ್ಲೆಯಾಗಿದ್ದು, ಕೇವಲ ಅಂತರ್ಜಲದ ಮೇಲೆ ಮಾತ್ರವೇ ಅವಲಂಬಿತವಾಗಿದೆ, ಅಂತರ್ಜಲವು ವಿವಿಧ ಕಾರಣಗಳಿಂದಾಗಿ ಕಲುಷಿತವಾಗುತ್ತಿದ್ದು ಇದರ ಪರಿಣಾಮ ಜನ ಜಾನುವಾರುಗಳ ಮೇಲೆ ಅಲ್ಲದೆ ಬೆಳೆಯುವ ಬೆಳೆಗಳ ಫಸಲಿನ ಮೇಲೂ ಆಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಸಂಪುಟ ಸಚಿವರಾಗಿ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಯಾವುದಾದರೂ ಮೂಲದಿಂದ ಕಲ್ಪಿಸಲು ಅಗತ್ಯ ನೆರವು ಮತ್ತು ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದು, ಸದಾ ರೈತರ ಪರವಾಗಿಯೇ ಚಿಂತಿಸುವ ನೀವು ಕೋಲಾರ ಜಿಲ್ಲೆಯ ಅನ್ನದಾತರ ನೆರವಿಗೆ ಬನ್ನಿ ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಸಂಪುಟ ಸಚಿವರಾಗಿರುವುದರ ಜೊತೆಗೆ ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷದ ನಾಯಕರಾಗಿಯೂ ಮುಂದುವರೆಯುತ್ತಾ ಕರ್ನಾಟಕ ಹಾಗೂ ಕೋಲಾರ ಜಿಲ್ಲೆಯ ಬಗ್ಗೆಯೂ ಹೆಚ್ಚು ಗಮನಹರಿಸಬೇಕು, ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಜಯಭೇರಿ ಬಾರಿಸಲು ಅನುಕೂಲವಾಗುವಂತೆ ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳಿಸಬೇಕೆಂದು ಅವರು ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ಕೋಲಾರದಿಂದ ತೆರಳಿದ್ದ ಸಿ.ಎಂ.ಆರ್.ಶ್ರೀನಾಥ್, ಸುಧಾಕರ್ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ರಮೇಶ್ ಮತ್ತಿತರರ ನಿಯೋಗವು ಕೋಲಾರ ಸಂಸದ ಎಂ.ಮಲ್ಲೇಶ್‌ಬಾಬುರೊಂದಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾಗಿರುವ ಹೃದಯ ತಜ್ಞರಾದ ಡಾ.ಮಂಜುನಾಥ್‌ರನ್ನು ದೆಹಲಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದ್ದಾರೆ.